
ನವದೆಹಲಿ: ಬಿಜೆಪಿಯ ಭೂಸ್ವಾಧೀನ ಸುಗ್ರೀವಾಜ್ಞೆ ರೈತ ವಿರೋಧಿ ಎಂದು ಕೂಗೆಬ್ಬಿಸುತ್ತಿರುವ ಪ್ರತಿಪಕ್ಷ ಕಾಂಗ್ರೆಸ್ ಅನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ರಾಜ್ಯಸಭೆಯಲ್ಲಿ ಗುರುವಾರ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಯುಪಿಎ ಸರ್ಕಾರದ ಅವಧಿಯ ಭೂಕಾಯ್ದೆಗಳು ರಾಷ್ಟ್ರೀಯ ಭದ್ರತೆಯನ್ನೇ ಅಪಾಯಕ್ಕೊಡ್ಡುವಂತಿತ್ತು. ದೇಶದಲ್ಲಿ ಆರಂಭಿಸಲುದ್ದೇಶಿಸಿರುವ ಸೂಕ್ಷ್ಮ ರಕ್ಷಣಾ ಯೋಜನೆಗಳ ಕುರಿತು ಪಾಕಿಸ್ತಾನ ಕೂಡ ಮಾಹಿತಿ ಪಡೆಯಬಹುದಾಗಿತ್ತು ಎಂದು ಜೇಟ್ಲಿ ತಿರುಗೇಟು ನೀಡಿದ್ದಾರೆ.
ಯುಪಿಎ ಸರ್ಕಾರ ಅವಧಿಯದು ದೋಷಾಪೂರಿತ ಕಾಯ್ದೆಯಾಗಿದೆ. ಯಾವುದೇ ಯೋಜನೆ ಜಾರಿಯಾಗಬೇಕಾದರೆ ಭೂಸ್ವಾಧೀನಕ್ಕಾಗಿ ಶೇ. 70 ರಷ್ಟು ಗ್ರಾಮಸ್ಥರ ಒಪ್ಪಿಗೆ ಕಡ್ಡಾಯವಾಗಿತ್ತು. ಇದರ ಜತೆಗೆ ಯೋಜನೆ ಜಾರಿಗೆ ಸಾಮಾಜಿಕ ಪರಿಣಾಮಗಳ ಅಧ್ಯಯನವೂ ನಡೆಬೇಕಿತ್ತು. ಇದರಿಂದ ಆ ಯೋಜನೆಗಳ ಕುರಿತ ಮಾಹಿತಿಯನ್ನು ಪಾಕಿಸ್ತಾನ ಸುಲಭವಾಗಿ ಪಡೆಯಬಹುದಾಗಿತ್ತು. ಆ ದೋಷಪೂರಿತ ಕಾನೂನನ್ನು ನಾವು ತಿದ್ದುಪಡಿ ಮಾಡಿದ್ದೇವೆ ಎಂದು ಜೇಟ್ಲಿ ಹೇಳಿದ್ದಾರೆ.
ಇದಲ್ಲದೆ, ಯುಪಿಎ ಅವಧಿಯಲ್ಲಿ ಮಾಧ್ಯಮದಲ್ಲಿ ಪ್ರತಿದಿನ ಕೇವಲ ಹಗರಣಗಳೇ ಸದ್ದು ಮಾಡುತ್ತಿದ್ದವು. ನಾವು ಅಧಿಕಾರಕ್ಕೆ ಬಂದು 9 ತಿಂಗಳಾಗಿದೆ. ಅರ್ಥವ್ಯವಸ್ಥೆ ಸುಧಾರಣೆಯಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾವು ಗಮನ ಸೆಳೆಯುತ್ತಿದ್ದೇವೆ ಎಂದು ಜೇಟ್ಲಿ ಹೇಳಿದರು.
ಇದೇ ವೇಳೆ, ಸುಗ್ರೀವಾಜ್ಞೆಯನ್ನು ರೈತ ವಿರೋಧಿ ಎಂದು ಬಿಂಬಿಸುವ ಪ್ರತಿಪಕ್ಷಗಳ ಕ್ರಮಕ್ಕೂ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇಂಥದ್ದೊಂದು ಆಂದೋಲನ ಸೃಷ್ಟಿಸಲಾಗುತ್ತಿದೆ. ನಾನು ಕಾಂಗ್ರೆಸ್ ಮುಂದೆ ಕೈ ಮುಗಿದು ಕೇಳುತ್ತೆನೆ. ನೀವೂ ಅಧಿಕಾರದಲ್ಲಿದ್ದವರು. ದೇಶದಲ್ಲಿ ಮೂಲಸೌಲಭ್ಯ ಮತ್ತು ಉದ್ಯಮವು ಟೀಕೆಗೆ ಗುರಿಯಾಗುವಂಥ ವಾತಾವರಣ ಸೃಷ್ಟಿಸಬೇಡಿ ಎಂದು ಜೇಟ್ಲಿ ಮನವಿ ಮಾಡಿದರು.
ಶರ್ಮಾ ವಿಚಾರ ಪ್ರಸ್ತಾಪಿಸಿದ ಜೇಟ್ಲಿ
ಯುಪಿಎ ಸರ್ಕಾರದ ಹಳೆಯ ಭೂಸ್ವಾಧೀನ ವಿಧೇಯಕ ವಿರೋಧಿಸಿ ಅಂದಿನ ವಾಣಿಜ್ಯ ಸಚಿವ ಆನಂದ್ ಶರ್ಮಾ ಅವರು ಬರೆದಿದ್ದ ಪತ್ರವನ್ನು ಜೇಟ್ಲಿ ರಾಜ್ಯಸಭೆಯಲ್ಲಿ ಗುರುವಾರ ಪ್ರಸ್ತಾಪಿಸಿದ್ದಾರೆ. ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಬರೆದ ಪತ್ರದಲ್ಲಿ ಶರ್ಮಾ ಅವರು ಈ ವಿಧೇಯಕ ಭವಿಷ್ಯದಲ್ಲಿ ಬೀರಬಹುದಾದ ಅಡ್ಡಪರಿಣಾಮಗಳ ಕುರಿತು ಎಚ್ಚರಿಸಿದ್ದರು. ಈ
ವಿಚಾರದಲ್ಲಿ ಪ್ರಧಾನಿ ಸಿಂಗ್ ಮಧ್ಯಪ್ರವೇಶಿಸುವಂತೆ ಆಗ್ರಹಿಸಿದ್ದರು. ಆ ವಿಧೇಯಕ ಕೈಗಾರಿಕೆ, ನಗರಾಭಿವೃದ್ಧಿ ಮೇಲೆ ದೂರಗಾಮಿ ಪರಿಣಾಮ ಬೀರುತ್ತದೆ ಎಂದು ಹೇಳಿದ್ದರು. ಈ ಪತ್ರವನ್ನು ಮೇ 25, 2012ರಲ್ಲಿ ಶರ್ಮಾ ಬರೆದಿದ್ದರು. ಈ ಪತ್ರವನ್ನೇ ಮುಂದಿಟ್ಟುಕೊಂಡು ಜೇಟ್ಲಿ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡರು.
Advertisement