
ಬೆಂಗಳೂರು: ದೇಶದಲ್ಲೇ ಮೂರನೇ ಅತಿ ಹೆಚ್ಚು ವಿಮಾನ ಸಂಚಾರ ಹಾಗೂ ಪ್ರಯಾಣಿಕರ ದಟ್ಟಣೆಯ ಏರ್‌ಪೋರ್ಟ್ ಆಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್) ಹೊರ ಹೊಮ್ಮಿದೆ.
ದೆಹಲಿ, ಮುಂಬೈ ನಂತರ ಮೂರನೇ ಅತಿ ದಟ್ಟಣೆ ಏರ್‌ಪೋರ್ಟ್ ಆಗಿ ಕೆಐಎಎಲ್ ಹೊರಹೊಮ್ಮಿದ್ದು, ಕಳೆದ ವರ್ಷ ಮೂರನೇ ಸ್ಥಾನದಲ್ಲಿದ್ದ ಚೆನ್ನೈ ವಿಮಾನ ನಿಲ್ದಾಣವನ್ನು ಹಿಂದಿಕ್ಕಿದೆ.
2014ರ ಡಿಸೆಂಬರ್ ಅಂತ್ಯದ ವೇಳೆಗೆ ಕೆಐಎಎಲ್ ಮೂಲಕ 14.38 ದಶಲಕ್ಷ ಜನರು ಪ್ರಯಾಣಿಸಿದ್ದಾರೆ. ದೇಶಿಯ ವೈಮಾನಿಕ ಮಾರುಕಟ್ಟೆಯಲ್ಲಿ ಕೆಐಎಎಲ್‌ನಿಂದ ಹೊಸ ಮಾರ್ಗಗಳ ಹಿನ್ನೆಲೆಯಲ್ಲಿ ಶೇ.14ರಷ್ಟು ಹೆಚ್ಚಳ ಕಂಡಿದೆ. ನಿತ್ಯ ಸರಾಸರಿ 359 ವಿಮಾನಗಳು ಸಂಚರಿಸುತ್ತಿದ್ದು 2014ರಲ್ಲಿ ಒಟ್ಟು 1,10,773 ವಿಮಾನಗಳು ಸಂಚರಿಸಿವೆ.
ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ 20,330 ವಿಮಾನಗಳು ಸಂಚರಿಸಿವೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 2014ರಲ್ಲಿ ಶೇ.12.5 ರಷ್ಟು ಹೆಚ್ಚು ಪ್ರಯಾಣಿಕರನ್ನು ಕೆಐಎಎಲ್ ನಿರ್ವಹಿಸಿದೆ. ದೇಶಿಯ ಮಾರ್ಗಗಳಲ್ಲಿ 11.55 ದಶಲಕ್ಷ ಪ್ರಯಾಣಿಕರು ಸಂಚರಿಸುವ ಮೂಲಕ ಸಂಖ್ಯೆ ಶೇ.13.5 ಹೆಚ್ಚಳವಾಗಿದೆ. ಅಂತಾರಾಷ್ಟ್ರೀಯ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಶೇ.9ರಷ್ಟು ಹೆಚ್ಚಳವಾಗಿದೆ.
ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ವಿಮಾನ ಹಾಗೂ ಪ್ರಯಾಣಿಕರು ಸಂಚರಿಸುವ ಏರ್‌ಪೋರ್ಟ್ ಆಗಿ ಕೆಐಎಎಲ್ ಹೊರಹೊಮ್ಮಿದೆ. ಈ ವರ್ಷ ಏರ್‌ಪೋರ್ಟ್ ಹೊಸ ಟರ್ಮಿನಲ್ ಉದ್ಘಾಟನೆಯಾಗಿದ್ದು ವಾರ್ಷಿಕ ಪ್ರಯಾಣಿಕರ ಸಾಮರ್ಥ್ಯ 20 ದಶಲಕ್ಷಕ್ಕೆ ಹೆಚ್ಚಿಸಿಕೊಂಡಿದೆ.
ಸರಕು ಸಾಗಣೆಯಲ್ಲೂ ಮುಂದು
2014ರಲ್ಲಿ 2,70,840 ಮೆಟ್ರಿಕ್ ಟನ್ ಸರಕು ಸಾಗಣೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ.13.7 ರಷ್ಟು ಹೆಚ್ಚಳ ಕಂಡಿದೆ.
Advertisement