ಬೆಂಗಳೂರು: ಜಾತಿ ಧರ್ಮಗಳನ್ನು ಪರಿಗಣಿಸದೇ ನಿಗದಿತ ಪ್ರಮಾಣ ಮೀರಿ ಶಬ್ದ ಮಾಲಿನ್ಯ ಉಂಟು ಮಾಡುತ್ತಿದ್ದಲ್ಲಿ ಅಂಥವರ ವಿರುದ್ಧ ಪರಿಸರ ಮಾಲಿನ್ಯ ಮಂಡಳಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಮೈಸೂರಿನ ಕಲ್ಯಾಣಗಿರಿಯ ದೇಗುಲದಲ್ಲಿ ಧ್ವನಿವರ್ಧಕ ಬಳಸುತ್ತಿರುವುದನ್ನು ಪ್ರಶ್ನಿಸಿ ಸ್ಥಳೀಯರಾದ ಮೊಹಮದ್ ಇಕ್ಬಾಲ್ ಅಹಮದ್, ಮೊಹಮದ್ ತೌಸಿಫ್, ಮೊಹಮದ್ ಬಿಲಾಲ್ ಷರೀಫ್, ನಾರಾಯಣಸ್ವಾಮಿ, ಕೌಸರ್ ಪಾಶಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ಈ ರೀತಿ ಹೇಳಿದೆ.
ಕಲ್ಯಾಣಗಿರಿಯ ರಾಜ್‌ಕುಮಾರ್ ರಸ್ತೆಯಲ್ಲಿನ ಕಲ್ಯಾಣ ಲಕ್ಷ್ಮೀ ವೆಂಕಟರಮಣಸ್ವಾಮಿ ದೇಗುಲದಲ್ಲಿ ಪ್ರತಿ ನಿತ್ಯ ಮುಂಜಾನೆ ಹಾಗೂ ಸಂಜೆಯ ವೇಳೆ ಪ್ರಾರ್ಥನೆ, ಭಜನೆ ಹಾಗೂ ಭಕ್ತಿಗೀತೆಗಳನ್ನು ಧ್ವನಿವರ್ಧಕ ಮೂಲಕ ಪ್ರಸಾರ ಮಾಡಲಾಗುತ್ತದೆ. ಇದು ವಸತಿ ಪ್ರದೇಶವಾಗಿದ್ದು, ಧ್ವನಿವರ್ಧಕದ ಬಳಕೆಯಿಂದ ಅಲ್ಲಿನ ನಿವಾಸಿಗಳಿಗೆ ತೊಂದರೆಯಾಗುತ್ತದೆ ಅರ್ಜಿದಾರರು ಆಕ್ಷೇಪಿಸಿದ್ದರು.
ಈ ಸಂಬಂಧ ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಡಿ.ಎಚ್.ವಘೇಲ ಹಾಗೂ ನ್ಯಾ.ರಾಮಮೋಹನರೆಡ್ಡಿ ಅವರಿದ್ದ ವಿಭಾಗೀಯ ಪೀಠ, ರಂಜಾನ್ ಸೇರಿದಂತೆ ಇತರ ಸಂದರ್ಭದಲ್ಲಿ ಧ್ವನಿವರ್ಧಕಗಳನ್ನು ಬಳಸುತ್ತಾರಲ್ಲವೇ ಎಂದು ಪ್ರಶ್ನಿಸಿತು.
ಆದರೆ ಶಬ್ಧ ಮಾಲಿನ್ಯಕ್ಕೆ ಯಾವುದೇ ಧರ್ಮ, ಜಾತಿಯ ಭೇದವಿಲ್ಲ. ಹೀಗಾಗಿ ಎಲ್ಲಾ ರೀತಿಯ ಶಬ್ಧ ಮಾಲಿನ್ಯ ತಡೆಗಟ್ಟಬೇಕು ಎಂದು ಅಭಿಪ್ರಾಯಪಟ್ಟಿತು. ಜತೆಗೆ, ಈ ಕುರಿತು ಈಗಾಗಲೇ ತೆಗೆದುಕೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ಸರ್ಕಾರಕ್ಕೆ ಸೂಚಿಸಿ, ವಿಚಾರಣೆಯನ್ನು ಮುಂದೂಡಿತು.
ಈ ಹಿಂದೆ ವಿಚಾರಣೆ ನಡೆಸಿದ್ದ ರಜಾಕಾಲದ ವಿಭಾಗೀಯ ಪೀಠ ಕೂಡ, ನಿಗದಿತ ಶಬ್ಧ ಪ್ರಮಾಣ ಮೀರಿದದ್ದೇ ಆದಲ್ಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಿತ್ತು.
Advertisement