
ಮುಂಬೈ: ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿ, ಬಾಲಿವುಡ್ ನಟ ಸಂಜಯ್ ದತ್ ಅವರು ಪೆರೋಲ್ ಅವಧಿ ವಿಸ್ತರಣೆ ಮಾಡುವಂತೆ ಕೋರಿ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ.
14 ದಿನಗಳ ಪೆರೋಲ್ ಮೇಲೆ ಪುಣೆಯ ಯರವಾಡ ಜೈಲಿನಿಂದ ಹೊರಗೆ ಬಂದಿರುವ ಸಂಜಯ್ ದತ್, ಈಗ ಮತ್ತೆ ತಮ್ಮ ಪೆರೋಲ್ ಅವಧಿಯನ್ನು ಎರಡು ವಾರ ವಿಸ್ತರಿಸುವಂತೆ ಜೈಲು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಸಂಜಯ್ ದತ್ ಅವರು ಡಿಸೆಂಬರ್ 24ರಂದು ಪೆರೋಲ್ ಮೇಲೆ ಹೊರಗಡೆ ಬಂದಿದ್ದು, ಅವರ ಪೆರೋಲ್ ಅವಧಿ ನಾಳೆ ಅಂತ್ಯಗೊಳ್ಳಲಿದೆ.
1993ರ ಮುಂಬೈ ಸರಣಿ ಸ್ಫೋಟ ಪ್ರಕರಣ ಸಂಬಂಧ 42 ತಿಂಗಳು ಜೈಲು ಶಿಕ್ಷೆಗೆ ಒಳಗಾಗಿರುವ ಸಂಜಯ್ ದತ್ ಅವರು, ಪತ್ನಿ ಮಾನ್ಯತಾಳ ಅನಾರೋಗ್ಯದ ನೆಪ ಹೇಳಿ 2013ರ ಡಿ.21ರಂದು ಒಂದು ತಿಂಗಳ ಪೆರೋಲ್ ಮೇಲೆ ಬಿಡುಗಡೆಯಾಗಿದ್ದರು. ನಂತರ ಮತ್ತೆ 2 ಬಾರಿ ಪೆರೋಲ್ ವಿಸ್ತರಿಸುವಂತೆ ಅರ್ಜಿ ಹಾಕಿದ್ದರು. ಹೀಗೆ ಒಟ್ಟು 3 ತಿಂಗಳ ಕಾಲ ಪೆರೋಲ್‌ನಲ್ಲಿ ಹೊರಗಿದ್ದರು. ಇದಲ್ಲದೆ ಕಳೆದ ಡಿಸೆಂಬರ್ 24ರಂದು 14 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆಯಾಗಿದ್ದು, ಒಟ್ಟಿನಲ್ಲಿ ಅವರು ಮೇ, 2013ರಿಂದ ಮೇ, 2014ರವರೆಗೆ ಒಟ್ಟು 118ದಿನ ಜೈಲಿನಿಂದ ಹೊರಗಿದ್ದಾರೆ.
ಈ ಮಧ್ಯೆ, ಸಂಜಯ್ ದತ್‌ಗೆ ಪದೆಪದೇ ಪೆರೋಲ್ ನೀಡುತ್ತಿರುವ ಜೈಲು ಅಧಿಕಾರಿಗಳ ಕ್ರಮವನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಸರ್ಕಾರ, ದತ್ ಪೆರೋಲ್ ಪ್ರಕರಣದ ಕುರಿತು ತನಿಖೆಗೆ ಆದೇಶಿಸಿದೆ.
Advertisement