ಪ್ಯಾರಿಸ್ ಶೂಟೌಟ್: ಉಗ್ರರಿಗೆ 51 ಕೋಟಿ ರು. ಬಹುಮಾನ ನೀಡಲು ಸಿದ್ಧ ಎಂದ ಬಿಎಸ್‌ಪಿ ನಾಯಕ

ಯಾರೂ ಪ್ರವಾದಿಗೆ ಅಗೌರವ ತೊರುವಂತಹ ಧೈರ್ಯ ಮಾಡುತ್ತಾರೋ ಅಂತವರಿಗೆ ಪ್ಯಾರಿಸ್‌ನ ಪ್ರಮುಖ ವಾರ ಪತ್ರಿಕೆ...
ಹಜಿ ಯಾಕೂಬ್ ಖುರೇಶಿ
ಹಜಿ ಯಾಕೂಬ್ ಖುರೇಶಿ

ಮೀರತ್: ಯಾರೂ ಪ್ರವಾದಿಗೆ ಅಗೌರವ ತೊರುವಂತಹ ಧೈರ್ಯ ಮಾಡುತ್ತಾರೋ ಅಂತವರಿಗೆ ಪ್ಯಾರಿಸ್‌ನ ಪ್ರಮುಖ ವಾರ ಪತ್ರಿಕೆ 'ಚಾರ್ಲಿ ಹೆಬ್ಡೋ' ಪತ್ರಕರ್ತರ ಹತ್ಯೆ ರೀತಿಯೇ ಉತ್ತರ ನೀಡಬೇಕು ಎಂದು ಬಹುಜನ ಸಮಾಜ ಪಕ್ಷ(ಬಿಎಸ್‌ಪಿ)ದ ನಾಯಕ ಹಜಿ ಯಾಕೂಬ್ ಖುರೇಶಿ ಹೇಳಿದ್ದಾರೆ.

ಪ್ಯಾರಿಸ್ ಶೂಟೌಟ್ ಪ್ರಕರಣದ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಮಾಜಿ ಸಚಿವ ಹಾಗೂ ಬಿಎಸ್‌ಪಿ ನಾಯಕ, ಉಗ್ರರ ದುಷ್ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ ಪ್ರವಾದಿಗೆ ಅಗೌರವ ತೊರುವವರಿಗೆ ಅವರ ಅನುಯಾಯಿಗಳು ಶಿಕ್ಷೆ ನೀಡುತ್ತಾರೆ ಎಂದಿದ್ದಾರೆ.

'ಶಾಂತಿ ಮತ್ತು ಪ್ರೀತಿಯ ಸಂದೇಶ ಸಾರಿದ ಪ್ರವಾದಿ ಮೊಹಮ್ಮದ್ ಅವರಿಗೆ ಯಾರೂ ಅವಮಾನ ಮಾಡುತ್ತಾರೋ, ಅವರಿಗೆ ಸಾವೇ ಗತಿ, ಅವರನ್ನು ಕಾನೂನಿನ ಶಿಕ್ಷೆಗೆ ಒಳಪಡಿಸುವ ಅಗತ್ಯ ಇಲ್ಲ' ಎಂದು ಮೀರತ್ ನಾಯಕ ಹೇಳಿದ್ದಾರೆ.

ಈ ಹಿಂದೆಯೂ ಇಂತಹದ್ದೇ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಖುರೇಶಿ ಸುದ್ದಿಯಾಗಿದ್ದರು. 2006ರಲ್ಲಿ ಮೀರತ್ ಸಾರ್ವಜನಿಕ ಸಭೆಯಲ್ಲೇ ಪ್ರವಾದಿ ಮೊಹಮ್ಮದ್ ಅವರ ವಿವಾದಾತ್ಮಕ ವ್ಯಂಗ್ಯ ಚಿತ್ರ ಚಿತ್ರಿಸಿದ್ದ ಡ್ಯಾನಿಶ್ ವ್ಯಂಗ್ಯಚಿತ್ರಕಾರನ ಹತ್ಯೆಗೆ 51 ಕೋಟಿ ರುಪಾಯಿ ಬಹುಮಾನ ಘೋಷಿಸಿದ್ದರು. ಇದೀಗ ಪ್ಯಾರಿಸ್‌ನ ಚಾರ್ಲಿ ಹೆಬ್ಡೋ ಪತ್ರಿಕೆ ಮೇಲೆ ದಾಳಿ ಮಾಡಿದ ಉಗ್ರರಿಗೂ 51 ಕೋಟಿ ರುಪಾಯಿ ಬಹುಮಾನ ನೀಡಲು ತಾನು ಸಿದ್ಧ ಎಂದಿದ್ದಾರೆ.

'ಒಂದು ವೇಳೆ ಅವರು(ಉಗ್ರರು) ಹಣಕ್ಕೆ ಬೇಡಿಕೆ ಇಟ್ಟರೆ, ನಾನು ಹಣ ನೀಡಲು ಸಿದ್ಧ' ಎಂದು ಹೇಳುವ ಮೂಲಕ ಬಿಎಸ್‌ಪಿ ನಾಯಕ ಉತ್ತರ ಪ್ರದೇಶ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇನ್ನು ಖುರೇಶಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶ ಹೆಚ್ಚುವರಿ ಪೊಲೀಸ್ ಮಾಹಾ ನಿರ್ದೇಶಕ ಮುಖುಲ್ ಗೋಯಲ್ ಅವರು, ಖುರೇಶಿಯ ಹೇಳಿಕೆಯನ್ನು ಪರಿಶೀಲಿಸಿದ ನಂತರ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇಸಿಸ್ ಮುಖ್ಯಸ್ಥನ ಕುರಿತಂತೆ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವ್ಯಂಗ್ಯಚಿತ್ರವನ್ನು ವಿರೋಧಿಸಿ ನಿನ್ನೆ ಬೆಳಗ್ಗೆ ಪ್ಯಾರಿಸ್‌ನ ಪ್ರಮುಖ ವಾರ ಪತ್ರಿಕೆ 'ಚಾರ್ಲಿ ಹೆಬ್ಡೋ' ಮೇಲೆ ಇಬ್ಬರು ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಪತ್ರಿಕೆಯ ಮುಖ್ಯ ಸಂಪಾದಕ, 4 ಪ್ರಮುಖ ಕಾರ್ಟೂನಿಸ್ಟ್‌ಗಳು, ಕಚೇರಿಯ ಭದ್ರತಾ ಸಿಬ್ಬಂದಿ ಮತ್ತು ಇಬ್ಬರು ಪೊಲೀಸರು ಸೇರಿದಂತೆ ಒಟ್ಟು 12 ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು. ಘಟನೆಯನ್ನು ಫ್ರಾನ್ಸ್ ದೇಶದ ಅಧ್ಯಕ್ಷ ಫ್ರಾನ್ ಸ್ವಾ ಓಲಾಂಡ್ ಸೇರಿದಂತೆ ವಿಶ್ವದ ವಿವಿಧ ಗಣ್ಯರು ಖಂಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com