ಕೆಲವರ ಹೇಳಿಕೆಯಿಂದ ಬಿಜೆಪಿ ಪ್ರತಿಷ್ಠೆ ಹಾಳಾಗುತ್ತಿದೆ: ಅಮಿತ್ ಶಾ

ಮರುಮತಾಂತರ ಕುರಿತಂತೆ ಪಕ್ಷದ ಕೆಲವು ಸಂಸದರು ನೀಡುತ್ತಿರುವ ಹೇಳಿಕೆಯಿಂದಾಗಿ ಬಿಜೆಪಿ ಪಕ್ಷದ...
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ

ಹೈದರಾಬಾದ್: ಮರುಮತಾಂತರ ಕುರಿತಂತೆ ಪಕ್ಷದ ಕೆಲವು ಸಂಸದರು ನೀಡುತ್ತಿರುವ ಹೇಳಿಕೆಯಿಂದಾಗಿ ಬಿಜೆಪಿ ಪಕ್ಷದ ಪ್ರತಿಷ್ಠೆ ಹಾಳಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ಈ ಕುರಿತಂತೆ ಇಂದು ಹೈದರಾಬಾದ್ ನಲ್ಲಿ ಮಾತನಾಡಿರುವ ಅಮಿತ್ ಶಾ, ಪಕ್ಷದ ಸಂಸದರು ಅಥವಾ ಸದಸ್ಯರು ಮನಬಂದಂತೆ ಹೇಳಿಕೆ ನೀಡುತ್ತಿದ್ದರೆ ಬಿಜೆಪಿ ಪ್ರತಿಷ್ಠೆ ಹಾಳಾಗುವುದರಲ್ಲಿ ಎರಡು ಮಾತಿಲ್ಲ. ಆದ್ದರಿಂದ ಪಕ್ಷದ ಎಲ್ಲಾ ಸಂಸದರು ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುವಾಗ ಯೋಚಿಸಿ ಮಾತನಾಡಬೇಕು ಎಂದು ಪಕ್ಷದ ಸಂಸದರಿಗೆ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ, ಮರುಮಂತಾಂತರ ಕುರಿತಂತೆ ಸಮಗ್ರ ಹಾಗೂ ಪ್ರಬಲ ಕಾನೂನು ಜಾರಿಯಾಗಬೇಕಿದೆ. ಆದರೆ, ಇದಕ್ಕೆ ಬೆಂಬಲ ಸೂಚಿಸಲು ಯಾವುದೇ ಜ್ಯಾತ್ಯಾತೀತ ಪಕ್ಷಗಳು ಮುಂದೆ ಬಾರದಿರುವುದು ದುರಾದೃಷ್ಟಕರ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.

ಇದೇ ವೇಳೆ ಮಾಧ್ಯಮಗಳ ಮೇಲೆ ಕಿಡಿಕಾರಿರುವ ಅಮಿತ್ ಶಾ, ಈ ಕುರಿತ ಮಾಧ್ಯಮಗಳ ಚರ್ಚೆಯಿಂದ ಮರುಮತಾಂತರವನ್ನು ನಿಲ್ಲಿಸಲು ಸಾಧ್ಯವಿದೆಯೇ? ಮಾಧ್ಯವೇ ದೇಶ ಹಾಗೂ ಕಾನೂನನ್ನು ಮುನ್ನಡೆಸುತ್ತಿದೆಯೇ? ಕಾನೂನು ದೇಶವನ್ನು ಮುನ್ನಡೆಸುತ್ತಿದೆ ಎಂದಾದರೆ ಮರುಮತಾಂತರ ಕುರಿತ ಬಲವಾದ ಶಾಸನದ ಅಗತ್ಯವಿದೆ ಎಂದು ಹೇಳಿದರು.

ಮೀರತ್‌ನಲ್ಲಿ ನಿನ್ನೆ ನಡೆದ ಎರಡನೇ ಸಂತ ಸಮಾಗಮ ಮಹೋತ್ಸವದಲ್ಲಿ ಮಾತನಾಡಿದ್ದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ 'ಹಿಂದೂ ಮಹಿಳೆಯರು ಕನಿಷ್ಟ ಪಕ್ಷ ನಾಲ್ಕು ಮಕ್ಕಳನ್ನಾದರು ಹೆರಬೇಕು, ಒಂದು ಮಗುವನ್ನು ನಮಗೆ ನೀಡಿ, ಮತ್ತೊಂದು ಮಗುವನ್ನು ದೇಶದ ಗಡಿ ರಕ್ಷಣೆಗೆ ನೀಡಬೇಕು' ಎಂದು ಹೇಳಿದ್ದರು.

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಮಿತ್ ಶಾ, ಈ ಹೇಳಿಕೆ ಅವರ ವೈಯಕ್ತಿಕವಾದ್ದರಿಂದ, ಇದಕ್ಕೆ ಪಕ್ಷ ಹೊಣೆಯಲ್ಲ. ಈ ರೀತಿಯ ಹೇಳಿಕೆಗಳಿಂದ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಮೇಲೆ ಯಾವ ರೀತಿಯ ಪರಿಣಾಮವೂ ಬೀರುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com