ಅಪಹರಣ ಕೇಸಲ್ಲಿ ಲಖ್ವಿಗೆ ಜಾಮೀನು, ಆದರೂ ಜೈಲೇ ಗತಿ

6 ವರ್ಷದ ಹಿಂದಿನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಬಂಧಿತನಾಗಿದ್ದ ಮುಂಬೈ...
ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಝಕೀವುರ್ ರೆಹಮಾನ್ ಲಖ್ವಿ
ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಝಕೀವುರ್ ರೆಹಮಾನ್ ಲಖ್ವಿ

ಇಸ್ಲಾಮಾಬಾದ್: 6 ವರ್ಷದ ಹಿಂದಿನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಬಂಧಿತನಾಗಿದ್ದ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಝಕೀವುರ್ ರೆಹಮಾನ್ ಲಖ್ವಿಗೆ ಪಾಕಿಸ್ತಾನದ ಕೆಳ ಹಂತದ ನ್ಯಾಯಾಲಯವು ಶುಕ್ರವಾರ ಜಾಮೀನು ನೀಡಿದೆ. ಆದರೆ ಸುಪ್ರೀಂಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ಲಖ್ವಿ ಮತ್ತೆ ಜೈಲು ವಾಸವನ್ನು ಮುಂದುವರೆಸುವಂತಾಗಿದೆ.

ಮುಂಬೈ ದಾಳಿ ಮತ್ತು ಕಾನೂನು ವ್ಯವಸ್ಥೆಗೆ ಧಕ್ಕೆ ತಂದ ಪ್ರಕರಣಗಳಲ್ಲಿ ಕಳೆದ ತಿಂಗಳು ಲಖ್ವಿಗೆ ಜಾಮೀನು ಲಭಿಸಿತ್ತು. ಲಖ್ವಿ ಬಿಡುಗಡೆಯಾಗುತ್ತಾರೆ ಎನ್ನುವಷ್ಟರಲ್ಲಿ 6 ವರ್ಷದ ಹಿಂದಿನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಪೊಲೀಸರು ಮತ್ತೆ ಲಖ್ವಿಯನ್ನು ಬಂಧಿಸಿದ್ದರು. ನಂತರ ಪಾಕ್ ಸರ್ಕಾರದ ಆದೇಶವನ್ನು ಹೈಕೋರ್ಟ್ ಅಮಾನತು ಮಾಡಿ ಆದೇಶ ನೀಡಿತ್ತು. ಇದಕ್ಕೆ ಪಾಕ್ ಸರ್ಕಾರ ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.

ಝಕಿ ಉರ್ ರೆಹಮಾನ್ ಲಖ್ವಿ ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 2009ರಿಂದಲೂ ಜೈಲುವಾಸದಲ್ಲಿದ್ದ. ಕಳೆದ ವರ್ಷ ಡಿ.18ರಂದು ಭಯೋತ್ಪಾದನಾ ನಿಗ್ರಹ ಕೋರ್ಟ್ ಲಖ್ವಿಗೆ ಜಾಮೀನು ನೀಡಿತ್ತು. ಆದರೆ ಮತ್ತೆ ಆತನನ್ನು ಬಂಧಿಸಲಾಗಿತ್ತು. ಇದನ್ನು ಪ್ರಶ್ನಿಸಿದ್ದ ಲಖ್ವಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದನು. ನಂತರ ಹೈಕೋರ್ಟ್ ಆತನ ಬಂಧನದ ಆದೇಶ ಅಮಾನತಿನಲ್ಲಿಟ್ಟು ಜಾಮೀನು ನೀಡಿತ್ತು. ಪಾಕಿಸ್ತಾನದ ಈ ನಿಲುವಿಗೆ ದೇಶದಾದ್ಯಂತ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಲಖ್ವಿ ಬಿಡುಗಡೆ ಕುರಿತಂತೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com