
ನವದೆಹಲಿ: ಸುನಂದಾ ಪುಷ್ಕರ್ ಸಾವು ಪ್ರಕರಣದಲ್ಲಿ ಪತಿ , ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಅವರು ಸಂಕಷ್ಟಕ್ಕೆ ಸಿಲುಕುವುದು ಸ್ಪಷ್ಟವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಶಶಿ ತರೂರ್ ಅವರು ದೆಹಲಿಗೆ ವಾಪಾಸಾಗಿದ್ದಾರೆ.
ರಾಜಧಾನಿಗೆ ಆಗಮಿಸುತ್ತಿದ್ದಂತೆ ಅವರು ಪ್ರಕರಣಕ್ಕೆ ಸಂಬಂಧಿಸಿ ಕಾನೂನು ತಜ್ಞರ ಅಭಿಪ್ರಾಯ ಪಡೆದಿದ್ದಾರೆ. ಮೂಲಗಳ ಪ್ರಕಾರ ಎಲ್ಲ ಬಹುತೇಕ ಸಾಕ್ಷಿಗಳು ತರೂರ್ ಅವರ ವಿರುದ್ಧವಾಗಿಯೇ ಇವೆ. ಹೀಗಾಗಿ ತರೂರ್ ಅವರು ಈ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಈ ನಡುವೆ, ದೆಹಲಿ ಪೊಲೀಸರಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತರೂರ್ ಭರವಸೆ ನೀಡಿದ್ದಾರೆ.
ಸದ್ಯಕ್ಕಿಲ್ಲ ವಿಚಾರಣೆ: ಸುನಂದಾ ಪುಷ್ಕರ್ ಪ್ರಕರಣದಲ್ಲಿ ಶಶಿ ತರೂರ್ ಅವರನ್ನು ವಿಚಾರಣೆ ನಡೆಸುವುದಿಲ್ಲ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಮೊದಲು ಸಾಕ್ಷಿಗಳ ವಿಚಾರಣೆ ನಡೆಸಲಾಗುವುದು. ಆ ಬಳಿಕ ತರೂರ್ ಪ್ರಶ್ನಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೆಹರ್ ಸಂಬಂಧದಿಂದ ಅಸಮಾಧಾನ: ತರೂರ್ ಮತ್ತು ಪಾಕಿಸ್ತಾನದ ಪತ್ರಕರ್ತೆ ಮೆಹರ್ ತರಾರ್ ನಡುವಿನ ಸಂಬಂಧದಿಂದ ಸುನಂದಾ ತೀವ್ರ ಅಸಮಾಧಾನಗೊಂಡಿದ್ದರು. ಈ ವಿಚಾರಕೆ ಸಂಬಂಧಿಸಿ ಸುನಂದಾ ಅವರು ತಮ್ಮ ಗೆಳತಿ ಜತೆಗೆ ಅಸಮಾಧಾನವನ್ನೂ ತೋಡಿಕೊಂಡಿದ್ದರು ಎನ್ನುವ ವಿಚಾರ ಬಹಿರಂಗವಾಗಿದೆ.
ಇದಲ್ಲದೆ, ತರಾರ್ ಹಾಗೂ ತರೂರ್ ದುಬೈನಲ್ಲಿ ಕೆಲಕಾಲ ಜತೆಯಾಗಿ ಕಾಲಕಳೆದಿದ್ದರು ಎಂದು ಸುನಂದಾ ಸಾವು ಪ್ರಕರಣಕ್ಕೆ ಸಂಬಂಧಿಸಿ ತನಿಖಾಧಿಕಾರಿಗಳಿಗೆ ಸಾಕ್ಷಿಯೊಬ್ಬರು ಹೇಳಿದ್ದಾರೆ.
ಆದರೆ, ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ತರಾರ್ ನಿರಾಕರಿಸಿದ್ದಾರೆ. ನಾನೀಗ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಪೊಲೀಸರು ಕರೆ ಮಾಡಿದಾಗ ನಾನು ಅವರ ವಿಚಾರಣೆಗೆ ಸಹಕಾರ ನೀಡುತ್ತೇನೆ ಎಂದು ತರಾರ್ ಹೇಳಿದ್ದಾರೆ.
Advertisement