
ನವದೆಹಲಿ: ಕನ್ನಡಿಗ ಆಲೂರು ಸೀಲಿನ್ ಕಿರಣ್ ಕುಮಾರ್ ಭಾರತೀಯ ಬಾಹ್ಯಾಕಶ ಸಂಶೋಧನಾ ಸಂಸ್ಥೆ(ಇಸ್ರೋ)ದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಅಹಮದಾಬಾದ್‌ನ ಬಾಹ್ಯಾಕಾಶ ತಂತ್ರಜ್ಞಾನ ಕೇಂದ್ರದ(ಎಸ್‌ಎಸಿ) ನಿದೇರ್ಶಕರಾಗಿದ್ದ ಕಿರಣ್‌ರನ್ನು ಸೋಮವಾರ ಪ್ರಧಾನಿ ಮೋದಿ ನೇತೃತ್ವದ ಸಂಪುಟದ ನೇಮಕ ಸಮಿತಿ ಇಸ್ರೋ ಅಧ್ಯಕ್ಷರನ್ನಾಗಿ ನೇಮಕ ಮಾಡಿತು.
ಈ ಮೂಲಕ 20 ವರ್ಷಗಳ ನಂತರ ಕನ್ನಡಿಗರೊಬ್ಬರು ಇಸ್ರೋ ಮುಖ್ಯಸ್ಥರಾಗಿ ಆಯ್ಕೆಯಾದಂತಾಗಿದೆ.
ಕಿರಣ್‌ಕುಮಾರ್ ಅವರನ್ನು 3 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಹಾಗೂ ಬಾಹ್ಯಾಕಾಶ ಆಯೋಗದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ ಎಂದು ಸಂಪುಟ ಸಮಿತಿ ತಿಳಿಸಿದೆ. ಕಿರಣ್‌ಕುಮಾರ್ ಅವರು ಹಾಸನ ಮೂಲದ ಆಲೂರಿನವರು. ಇಳರು 1971ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ನ್ಯಾಷನಲ್ ಕಾಲೇಜಿನಿಂದ ಭೌತಶಾಸ್ತ್ರ ಪದವಿ ಪಡೆದವರು. 1973ರಲ್ಲಿ ಎಲೆಕ್ಟ್ರಾನಿಕ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ನಂತರ ಬೆಂಗಳೂರಿನ ಐಐಎಸ್‌ಸಿಯಲ್ಲಿ ಫಿಸಿಕಲ್ ಎಂಜಿನಿಯರಿಂಗ್‌ನಲ್ಲಿ ಎಂ.ಟೆಕ್ ಮುಗಿಸಿದರು. ಅದೇ ವರ್ಷ ಅವರು ಇಸ್ರೋಗೆ ಸೇರ್ಪಡೆಗೊಂಡಿದ್ದರು.
ಚಂದ್ರಯಾನ-1 ಮತ್ತು ಮಂಗಳಯಾನಕ್ಕೆ ವಿಶೇಷ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ ಹೆಗ್ಗಳಿಕೆಗೂ ಕಿರಣ್ ಕುಮಾರ್ ಪಾತ್ರರಾಗಿದ್ದಾರೆ. ಮಂಗಳಯಾನದ ನಿರ್ಮಾಣ ಮತ್ತು ಉಡಾವಣೆ ಬಳಿಕ ಬಾಹ್ಯಾಕಾಶ ನೌಕೆಯು ಮಂಗಳನ ಕಕ್ಷೆಗೆ ತಲುಪುವವರೆಗೂ ಅವರ ಪಾತ್ರ ಮಹತ್ವದ್ದು. ಭೂಮಿ, ಸಾಗರ ವಾತಾವರಣ, ಗ್ರಹ ಸೇರಿದಂತೆ ವಿವಿಧ ಅಧ್ಯಯನಗಳಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಅವರು ವೈಜ್ಞಾನಿಕ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಅವರು ನೀಡಿದ ಕೊಡುಗೆಗಳನ್ನು ಪರಿಗಣಿಸಿ 2014ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
Advertisement