ಪಕ್ಷದಿಂದ ನನಗೆ ಯಾವ ನೋಟಿಸ್ ಬಂದಿಲ್ಲ: ಸಾಕ್ಷಿ ಮಹಾರಾಜ್‌

ಸಾಕ್ಷಿ ಮಹಾರಾಜ್‌
ಸಾಕ್ಷಿ ಮಹಾರಾಜ್‌

ನವದೆಹಲಿ: ವಿವಾದಾತ್ಮ ಕ ಹೇಳಿಕೆ ನೀಡಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್‌, ಪಕ್ಷದಿಂದ ತಮಗೆ ಶೋಕಾಸ್ ನೋಟಿಸ್ ಬಂದಿಲ್ಲ ಎಂದಿದ್ದಾರೆ.

ಈ ಕುರಿತು ಪ್ರಶ್ನಿಸಿದ ವರದಿಗಾರರಿಗೆ ಉತ್ತರಿಸುತ್ತಿದ್ದ ಅವರು, "ನನಗೆ ಯಾವ ನೋಟಿಸ್ ಬಂದಿಲ್ಲ. ಬಂದರೆ ನಾನದಕ್ಕೆ ಸೂಕ್ತ ಉತ್ತರ ನೀಡುತ್ತೇನೆ. ಇದು ಪಕ್ಷದ ಆಂತರಿಕ ವಿಷಯ. ನಾನು ನನ್ನ ಪಕ್ಷದ ಜತೆ ಮಾತನಾಡುತ್ತೇನೆ. ವಿನಾ ಮಾಧ್ಯಮದ ಬಳಿ ಚರ್ಚಿಸ ಬಯಸುವುದಿಲ್ಲ"  ಎಂದು ಹೇಳಿದ್ದಾರೆ.

'ನಿಮ್ಮ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಂಡರೆ ಏನು ಮಾಡುತ್ತೀರಿ?', ಎಂದು ವರದಿಗಾರರೊಬ್ಬರ ಪ್ರಶ್ನೆಗೆ ಕೆರಳಿದ ಅವರು, "ಈ ಚಿಂತೆ ನಿಮಗ್ಯಾಕೆ"? ಎಂದು ಮರು ಪ್ರಶ್ನೆ ಹಾಕಿದರು.

ಹಿಂದೂ ಮಹಿಳೆಯರು ಕನಿಷ್ಟ ಪಕ್ಷ ನಾಲ್ಕು ಮಕ್ಕಳನ್ನಾದರೂ ಹೆರಬೇಕು ಎಂದು  ಹೇಳಿದ್ದ ಹೇಳಿಕೆಗೆ 10 ದಿನಗಳೊಳಗೆ ಸ್ಪಷ್ಟನೆ ನೀಡುವಂತೆ ಉತ್ತರಪ್ರದೇಶ ಉನ್ನಾವದ ಸಂಸದ ಸಾಕ್ಷಿ ಮಹಾರಾಜ್‌ಗೆ ಬಿಜೆಪಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ ಎಂದು ವರದಿಯಾಗಿತ್ತು.

ಈ ಹಿಂದೆ ಮೀರತ್‌ನಲ್ಲಿ ನಡೆದ ಸಂತ ಸಮಾಗಮ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಧರ್ಮ ರಕ್ಷಣೆಗಾಗಿ 'ಹಿಂದೂ ಮಹಿಳೆಯರು ಕನಿಷ್ಟ ಪಕ್ಷ 4 ಮಕ್ಕಳನ್ನು ಹೆರಬೇಕು' ಎಂದಿದ್ದರು.

ಅಲ್ಲದೇ ಈ ಮೊದಲು ಅವರು ಲವ್ ಜಿಹಾದ್‌ಗೆ ವಿದೇಶದಿಂದ ಹಣ ಬರುತ್ತದೆ ಎಂದಿದ್ದರಲ್ಲದೇ  ರಾಷ್ಟ್ರಪಿತ ಮಹಾತ್ಮಾಗಾಂಧಿ ಹಂತಕ ನಾಥುರಾಮ್ ಗೋಡ್ಸೆಯನ್ನು ಓರ್ವ ಮಹಾನ್ ದೇಶಭಕ್ತ  ಎಂದು ಕರೆದಿದ್ದರು. ಈ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ಕ್ಷಮೆಯಾಚಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com