ರಾಹುಲ್ ಅಧ್ಯಕ್ಷರಾಗ್ಬೇಕು ಆದ್ರೆ ಅದು ಯಾವಾಗ?

ಏಪ್ರಿಲ್‌ನಲ್ಲೋ, ಆಗಸ್ಟ್‌ನಲ್ಲೋ ಹಿರಿಯ ನಾಯಕರಲ್ಲೇ ಗೊಂದಲ...
ಏಪ್ರಿಲ್ ನಲ್ಲಿ ರಾಹುಲ್ ಗಾಂಧಿ ಅಧ್ಯಕ್ಷರಾಗಿ ನೇಮಕ ಸಾಧ್ಯತೆ
ಏಪ್ರಿಲ್ ನಲ್ಲಿ ರಾಹುಲ್ ಗಾಂಧಿ ಅಧ್ಯಕ್ಷರಾಗಿ ನೇಮಕ ಸಾಧ್ಯತೆ

ನವದೆಹಲಿ: ಹಲವು ಚುನಾವಣೆಗಳ ಸೋಲಿಂದ ಕಂಗೆಟ್ಟ ಕಾಂಗ್ರೆಸ್‌ಗೆ ರಾಹುಲ್‌ಗಾಂಧಿ ಬಲ ತುಂಬಬೇಕು. ಅದಕ್ಕವರು ಪೂರ್ಣ ಪ್ರಮಾಣದಲ್ಲಿ ಅಂದರೆ ಪಕ್ಷದ ಅಧ್ಯಕ್ಷರಾಗಲೇಬೇಕು ಎಂಬ ಕಾಂಗ್ರೆಸಿಗರ ಬೇಡಿಕೆ ಶೀಘ್ರದಲ್ಲೇ ಈಡೇರುವುದು ಬಹುತೇಕ ಖಚಿತವಾಗಿದೆ.

ಪಕ್ಷದ ಹಿರಿಯ ನಾಯಕರಿಬ್ಬರು ಅದಕ್ಕೆ ಸಂಬಂಧಿಸಿದಂತೆ ಪೂರ್ವ ಸಿದ್ಧತೆ ಮಾಡಿದ್ದಾರೆಂದು ಹೇಳಲಾಗಿದೆ.

ಮಾರ್ಚ್-ಏಪ್ರಿಲ್‌ನಲ್ಲಿ ನಡೆಯುವ ಎಐಸಿಸಿ ಅಧಿವೇಶನ ಅಥವಾ ಜುಲೈ-ಆಗಸ್ಟ್‌ನಲ್ಲಿ ನಡೆಯಲಿರುವ ಪಕ್ಷದ ಮಹಾಧಿವೇಶನದಲ್ಲಿ ರಾಹುಲ್‌ಗೆ ಪಕ್ಷಾಧ್ಯತೆಯನ್ನು ನೀಡುವ ಬಗ್ಗೆ ಘೋಷಣೆ ಮಾಡಬೇಕೋ ಬೇಡವೋ ಎಂಬ ಇಕ್ಕಟಿನಲ್ಲಿದ್ದಾರೆ ನಾಯಕರು.

ಹಾಲಿ ಅಧ್ಯಕ್ಷೆ ಸೋನಿಯಾ ಗಾಂಧಿ ಅನಾರೋಗ್ಯದ ಕಾರಣದಿಂದಲಾದರೂ ರಾಹುಲ್‌ಗೆ ಬಡ್ತಿ ಸಿಗುವುದಂತೂ ಗ್ಯಾರಂಟಿ ಎನ್ನುವುದು ಕೈ ನಾಯಕರ ಅಂಬೋಣ.

ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೇ ತಿಂಗಳಿಗೆ ವರ್ಷ ಪೂರ್ತಿಯಾಗುತ್ತದೆ. ಅದಕ್ಕೆ ಪೂರಕವಾಗಿ ಮಾರ್ಚ್-ಏಪ್ರಿಲ್‌ನಲ್ಲಿ ರಾಹುಲ್‌ಗೆ ಅಧ್ಯಕ್ಷ ಹುದ್ದೆ ನೀಡಿದರೆ ಸರ್ಕಾರ ಕೈಗೊಂಡ ನೀತಿಗಳ ವಿರುದ್ಧ ಹೋರಾಟ ನಡೆಸಲು ಕಾಲ ಪಕ್ವವಾಗುತ್ತದೆ ಎನ್ನುವುದು ಹಲವರು ನಾಯಕರ ಅಭಿಪ್ರಾಯ.

ಅದಕ್ಕಾಗಿಯೇ ಈ ಅವಧಿಯಲ್ಲಿಯೇ ಅವರಿಗೆ ಪದೋನ್ನತಿ ನೀಡಬೇಕೆನ್ನುವುದು ಹಲವು ನಾಯಕರ ವಾದ. ಪಕ್ಷದ ನಾಯಕತ್ವ ವಹಿಸಲು ರಾಹುಲ್ ಕೂಡಾ ಸಜ್ಜಾಗಿದ್ದು, ಅಖಾಡಕ್ಕೆ ಧುಮುಕಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ. ಎರಡು ವರ್ಷದಿಂದ ಕಾಂಗ್ರೆಸ್ ಉಪಾಧ್ಯಕ್ಷ ಹುದ್ದೆಯನ್ನು ನಿಭಾಯಿಸಿದ ಅನುಭವವನ್ನೂ ಹೊಂದಿದ್ದಾರೆ.

ಈಚೆಗೆ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದು, ಆಸ್ಪತ್ರೆ ಓಡಾಟ ಹೆಚ್ಚಿದೆ. ಇದರಿಂದ ಪಕ್ಷದಲ್ಲಿ ತಂತ್ರಗಾರಿಕೆ ಹೆಣೆಯುವಲ್ಲಿ ಅವರಿಗೆ ಅನಾರೋಗ್ಯ ಅಡ್ಡಿಯಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com