ಸಿಬಿಎಫ್‌ಸಿಗೆ ಅರುಂಧತಿ ಸೇರಿ 9 ಮಂದಿ ರಾಜಿನಾಮೆ

ಕೇಂದ್ರೀಯ ಚಲನಚಿತ್ರ ಸೆನ್ಸಾರ್ ಮಂಡಳಿಯ ಅಧ್ಯಕ್ಷೆ ಲೀಲಾ ಸ್ಯಾಮ್ಸನ್ ಅವರು ತಮ್ಮ ಹುದ್ದೆಗೆ...
ಸಿಬಿಎಫ್‌ಸಿಗೆ ಅರುಂಧತಿ ಸೇರಿ 9 ಮಂದಿ ರಾಜಿನಾಮೆ

ಮುಂಬೈ/ನವದೆಹಲಿ: ಕೇಂದ್ರೀಯ ಚಲನಚಿತ್ರ ಸೆನ್ಸಾರ್ ಮಂಡಳಿಯ ಅಧ್ಯಕ್ಷೆ ಲೀಲಾ ಸ್ಯಾಮ್ಸನ್ ಅವರು ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ ಬೆನ್ನಲ್ಲೇ ಶನಿವಾರ ಕನ್ನಡತಿ ಅರುಂಧತಿ ನಾಗ್ ಸೇರಿದಂತೆ ಸಿಬಿಎಫ್‌ಸಿಯ 9 ಮಂದಿ ಸದಸ್ಯರು ರಾಜಿನಾಮೆ ಸಲ್ಲಿಸಿದ್ದಾರೆ.

ದೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್‌ಮೀತ್ ಸಿಂಗ್ ಅವರ ನಿರ್ದೇಶನದ ಸಿನಿಮಾ 'ಮೆಸೆಂಜರ್ ಆಫ್ ಗಾಡ್‌' ಬಿಡುಗಡೆಗೆ ಮೇಲ್ಮನವಿ ಪ್ರಾಧಿಕಾರ ಹಸಿರು ನಿಶಾನೆ ತೋರುತ್ತಿದ್ದಂತೆ ಸೆನ್ಸಾರ್ ಮಂಡಳಿಯಲ್ಲಿ ಸರ್ಕಾರದ ಹಸ್ತಕ್ಷೇಪದಿಂದ ಅಸಮಾಧಾನಗೊಂಡು ಲೀಲಾ ಸ್ಯಾಮ್ಸನ್ ರಾಜಿನಾಮೆ ನೀಡಿದ್ದರು.

ಈಗ ಲೀಲಾ ಅವರ ಆರೋಪಕ್ಕೆ ಧ್ವನಿಗೂಡಿಸಿ ಅರುಂಧತಿ ನಾಗ್, ಇರಾಭಾಸ್ಕರ್, ಲೋರಾಪ್ರಭು, ಪಂಕಜ್ ಶರ್ಮಾ, ರಾಜೀವ್ ಮಸಂದ್, ಶೇಖರ್ ಬಾಬು ಕಂಚೆರ್ಲಾ, ಶಾಜಿ ಕರುಣ್, ಶುಭ ಗುಪ್ತಾ ಮತ್ತು ಟಿ.ಜಿ. ತ್ಯಾಗರಾಜನ್ ರಾಜಿನಾಮೆ ಸಲ್ಲಿಸಿದ್ದಾರೆ.

ಸಭೆಗೆ ಹಣವನ್ನೂ ನೀಡುತ್ತಿಲ್ಲ
ನಾವು ಮಂಡಳಿಗೆ ಸೇರಿದಾಗಿನಿಂದಲೂ ಸಿಬಿಎಫ್‌ಸಿ ಕಾರ್ಯನಿರ್ವಹಣೆಗೆ ಅಗತ್ಯವಾದ ಕೆಲವು ಬದಲಾವಣೆಗಳನ್ನು ತರುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ ಸರ್ಕಾರ ಒಂದೇ ಒಂದು ಧನಾತ್ಮಕ ಕ್ರಮವನ್ನೂ ಕೈಗೊಂಡಿಲ್ಲ. ಹಿಂದಿನ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವರನ್ನು ಭೇಟಿಯಾಗಿ ಕೋರಿಕೆ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.

ಕಳೆದ 9 ತಿಂಗಳಿಂದ ಒಂದೇ ಒಂದು ಸಭೆಯೂ ನಡೆದಿಲ್ಲ. ಸಭೆ ನಡೆಸುವಂತೆ ಕೇಳಿದರೆ ನಮ್ಮಲ್ಲಿ ಹಣವಿಲ್ಲ ಎಂದು ಸಚಿವಾಲಯ ಹೇಳುತ್ತಿದೆ ಎಂದು ಸದಸ್ಯರು ಆರೋಪಿಸಿದ್ದಾರೆ. ಇದೇ ವೇಳೆ, ಮಂಡಳಿಯ ಅಧ್ಯಕ್ಷರೊಂದಿಗೆ ಸಚಿವಾಲಯ ನಡೆದುಕೊಂಡ ರೀತಿ ನಮಗೆಲ್ಲರಿಗೂ ತುಂಬಾ ನೋವಾಗಿದೆ. ಯಾವುದೇ ಸಂಸ್ಥೆಯ ಮುಖ್ಯಸ್ಥರ ಜತೆ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂದೂ 9 ಮಂದಿ ಸದಸ್ಯರು ಹೇಳಿದ್ದಾರೆ.

ಸದಸ್ಯರೇ ಹೊಣೆ
ಸಿಬಿಎಫ್‌ಸಿ ವಿವಾದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಅರುಣ್‌ಜೇಟ್ಲಿ, ಸಿಬಿಎಫ್‌ಸಿಯಲ್ಲಿ ಭ್ರಷ್ಟಾಚಾರವಿದ್ದರೆ ಯುಪಿಎ ಸರ್ಕಾರದಿಂದ ನೇಮಿಸಲ್ಪಟ್ಟವರೇ ಹೊಣೆ. ಸಭೆ ನಡೆದಿಲ್ಲವೆಂದರೆ ಅದು ಅವರ ಸ್ವಯಂ ಕೃತ ಅಪರಾಧ. ಸಭೆ ನಡೆಸಬೇಕಾದ್ದು ಸಚಿವಾಲಯವಲ್ಲ.

ಸಿಬಿಎಫ್‌ಸಿ ಅಧ್ಯಕ್ಷರು ಎಂದಿದ್ದಾರೆ. ನಾನಂತೂ ಸೆನ್ಸಾರ್ ಮಂಡಳಿಯ ಯಾವುದೇ ಸದಸ್ಯನೊಂದಿಗೂ ಮಾತನಾಡಿಲ್ಲ. ಈ ವಿವಾದಕ್ಕೆ ಯುಪಿಎ ರಾಜಕೀಯ ಬಣ್ಣ ನೀಡುತ್ತಿದೆ ಎಂದೂ ಜೇಟ್ಲಿ ಆರೋಪಿಸಿದ್ದಾರೆ. ಇದೇ ವೇಳೆ, ಲೀಲಾ ಸ್ಯಾಮ್ಸನ್ ಅವರು ತಮ್ಮ ಆರೋಪಗಳನ್ನು ಸಾಬೀತುಪಡಿಸುವ ಸಾಕ್ಷ್ಯಗಳನ್ನು ನೀಡಲಿ ಎಂದು ಸರ್ಕಾರ ಹೇಳಿದೆ.

ಇದೇ ವೇಳೆ, ಗುರ್‌ಮೀತ್ ಸಿಂಗ್ ಅವರ 'ಮೆಸೆಂಜರ್ ಆಫ್ ಗಾಡ್‌' ಚಿತ್ರ ಪ್ರದರ್ಶನಕ್ಕೆ ಪಂಜಾಬ್ ಸರ್ಕಾರ ಶನಿವಾರ ನಿಷೇಧ ಹೇರಿದೆ. ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಲುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com