ಸಸ್ಯಕಾಶಿಗೆ ಪುಷ್ಪ ಪ್ರೇಮಿಗಳ ದಂಡು

ಹೂಗಳ ರಾಶಿ, ಬಣ್ಣಗಳೊಂದಿಗೆ ಕಣ್ಮನ ಸೆಳೆಯುವ ಕಲಾಕೃತಿಗಳು, ಗಾಜಿನ ಅರಮನೆಯ ತುಂಬಾ ಸಸ್ಯ...
ಲಾಲ್‌ಬಾಗ್‌ನಲ್ಲಿ  201ನೇ ಫಲಪುಷ್ಪ ಪ್ರದರ್ಶನ
ಲಾಲ್‌ಬಾಗ್‌ನಲ್ಲಿ 201ನೇ ಫಲಪುಷ್ಪ ಪ್ರದರ್ಶನ
Updated on

ಬೆಂಗಳೂರು: ಹೂಗಳ ರಾಶಿ, ಬಣ್ಣಗಳೊಂದಿಗೆ ಕಣ್ಮನ ಸೆಳೆಯುವ ಕಲಾಕೃತಿಗಳು, ಗಾಜಿನ ಅರಮನೆಯ ತುಂಬಾ ಸಸ್ಯ ಪ್ರೇಮಿಗಳ ಗುಂಪು, ಎಲ್ಲರನ್ನೂ ಕ್ಯಾಮೆರಾ ಕಣ್ಣಲ್ಲಿ ಕಾಯುವ ಡ್ರೋನ್...

ಗಣರಾಜ್ಯೋತ್ಸವ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ 201ನೇ ಫಲಪುಷ್ಪ ಪ್ರದರ್ಶನಕ್ಕೆ ಶನಿವಾರ ಚಾಲನೆ ದೊರೆಯಿತು. ಜ.26ರವರೆಗೆ ನಡೆಯಲಿರುವ ಪ್ರದರ್ಶನದಲ್ಲಿ ಹಲವು ಹೊಸ ವಿಶೇಷತೆಗಳು ಗಮನ ಸೆಳೆಯುತ್ತಿವೆ. ಗಾಜಿನ ಮನೆಯಲ್ಲಿ 50 ಅಡಿ ಉದ್ದದ 28 ಅಡಿ ಅಗಲದ 'ಕೆಂಪು ಕೋಟೆ', ತಬಲ, ಗಿಟಾರ್ ಸೇರಿದಂತೆ ಸಂಗೀತ ವಾದ್ಯಗಳ ಕಲಾಕೃತಿ, ಸ್ಟ್ಯಾಚ್ಯೂ ಆಫ್ ಲಿಬರ್ಟಿ, ನ್ಯಾಯ ದೇವತೆಯ ಮೂರ್ತಿಗಳು ಗಮನ ಸೆಳೆದವು. 3 ಲಕ್ಷಕ್ಕೂ ಅಧಿಕ ಗುಲಾಬಿ, ಆರ್ಕಿಡ್, ಆಲ್‌ಸ್ಟಿಮೇರಿಯಾ ಹೂಗಳನ್ನು ಬಳಸಿ ಕೆಂಪಕೋಟೆ ನಿರ್ಮಿಸಲಾಗಿದೆ.

3-4ದಿನಗಳಿಗೊಮ್ಮೆ ಹೂಗಳನ್ನು ಬದಲಿಸಲಾಗುತ್ತದೆ. ಕೋಟೆಯ ಹಿಂಭಾಗದಲ್ಲಿ ' ಇಂಡಿಯಾ ಗೇಟ್‌' ಕಲಾಕೃತಿ ಮಾಡಲಾಗಿದೆ. ಇದರ ಹಿಂದೆ ಸ್ಟ್ಯಾಚ್ಯೂ ಆಫ್ ಲಿಬರ್ಟಿ ಹಾಗೂ ನ್ಯಾಯದೇವತೆಯ ಮೂರ್ತಿಗಳನ್ನು ಇಡಲಾಗಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್‌ನ ಅಚ್ಚ ಬಿಳುಪಿನ ಈ ಮೂರ್ತಿಗಳು ಹೂಗಳ ಹಿನ್ನೆಲೆಯಲ್ಲಿ ಕಣ್ಸೆಳೆಯುತ್ತಿವೆ.

ಹೂ ವಾದ್ಯ
ಹೂಗಳಿಂದ ನಿರ್ಮಿಸಿದ ಬ್ಯಾಂಡ್‌ಸ್ಟ್ಯಾಂಡ್ ಈ ಬಾರಿಯ ಮತ್ತೊಂದು ಆಕರ್ಷಣೆ. ಇಲ್ಲಿ ಪಿಯಾನೊ, ಗಿಟಾರ್, ತಬಲ ಹಾಗೂ ವೀಣೆಗಳನ್ನು ಹೂಗಳಲ್ಲಿ ನಿರ್ಮಿಸಿ ಪ್ರದರ್ಶನಕ್ಕಿಡಲಾಗಿದೆ. ಆಕರ್ಷಣೆಯ ಕೇಂದ್ರವಾದ ವಾದ್ಯಗಳ ಮುಂದೆ ನಿಂತು ಛಾಯಚಿತ್ರ ತೆಗೆಸಿಕೊಳ್ಳುವವರ ಸಂಖ್ಯೆ ಹೆಚ್ಚಿತ್ತು. 60 ಅಡಿ ಉದ್ದ ಹಾಗೂ 10 ಅಡಿ ಎತ್ತರದ ವರ್ಟಿಕಲ್ ಉದ್ಯಾನ ಹಾಗೂ ತಾರಸಿ ತೋಟಗಳಿಗೂ ಹೆಚ್ಚನವರು ಭೇಟಿ ನೀಡಿದರು. ಬೋನ್ಸಾಯ್ ಉದ್ಯಾನದಲ್ಲಿ ನ್ಯಾಷನಲ್ ಹೈಸ್ಕೂಲ್ ವಿದ್ಯಾರ್ಥಿಗಳಿಂದ 'ಟೈಟಾನಿಕ್‌' ದೋಣಿ ನಿರ್ಮಾಣವಾಗಲಿದೆ. ಮನರಂಜನೆ ಜೊತೆಗೆ ದೋಣಿ ನಿರ್ಮಿಸುವ ತಂತ್ರಜ್ಞಾನವನ್ನು ಮಕ್ಕಳಿಗೆ ಕಲಿಸಲಾಗುತ್ತದೆ.

ಎಂ.ಎಚ್.ಮರಿಗೌಡ ಸಭಾಂಗಣದಲ್ಲಿ ಪೂರಕ ಕಲೆಗಳ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ತರಕಾರಿಗಳಲ್ಲಿ ಕೆತ್ತನೆ ಮಾಡಿದ ಕಲಾಕೃತಿ, ಇಕೆಬಾನ, ಬೋನ್ಸಾಯ್ ಸಸಿಗಳನ್ನು ಬೆಳೆಸುವುದು ಹಲವು ಕಲೆಗಳನ್ನು ಪ್ರದರ್ಶಿಸಲಾಗುತ್ತದೆ.

ಡ್ರೋನ್ ಕಣ್ಗಾವಲು
ಭದ್ರತೆಗಾಗಿ ಬಳಸಲಾಗುತ್ತಿರುವ ಡ್ರೋನ್, ಪ್ರದರ್ಶನದ ಉದ್ಘಾಟನೆಯ ಸಂದರ್ಭದಲ್ಲಿ 20 ಅಡಿ ಮೇಲಕ್ಕೆ ಹಾರಿತು. 1 ಕಿ.ಮೀ. ದೂರಕ್ಕೆ ಹಾರುವ ಹಾಗೂ ವೀಕ್ಷಿಸುವ ಸಾಮರ್ಥ್ಯ ಹೊಂದಿರವ ಅದು ಪ್ರದರ್ಶನ ಮುಗಿಯುವವರೆಗೂ ಉದ್ಯಾನದ ಭದ್ರತೆಯ ಕೆಲಸ ಮಾಡಲಿದೆ. ಆರ್.ವಿ.ಶಿಕ್ಷಣ ಸಂಸ್ಥೆ ನಿರ್ಮಿಸಿರುವ ಡ್ರೋನ್ ಪ್ರತಿದಿನ ಲಾಲ್‌ಬಾಗ್‌ನ ನಾಲ್ಕು ದ್ವಾರಗಳಲ್ಲಿ ಕಣ್ಣಿಡಲಿದೆ.

ಭದ್ರತೆ, ಮೂಲಸೌಕರ್ಯ
ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದ ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಉದ್ಯಾನದಲ್ಲಿ ಭದ್ರತೆ ಹಾಗೂ ಮೂಲ ಸೌಕರ್ಯಗಳನ್ನು ನೀಡಲಾಗಿದೆ. ಜೆ.ಸಿ.ರಸ್ತೆ ಹಾಗೂ ಶಾಂತಿನಗರ ಬಸ್ಸು ನಿಲ್ದಾಣಗಳಲ್ಲಿ ವಾಹನ ನಿಲುಗಡೆಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ನಗರದಲ್ಲಿ ಮಾತ್ರವಲ್ಲದೆ ಬೇರೆ ಜಿಲ್ಲೆಗಳಲ್ಲೂ ಪ್ರದರ್ಶನಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು. ಸಚಿವ ರಾಮಲಿಂಗಾರೆಡ್ಡಿ, ಮೇಯರ್ ಶಾಂತಕುಮಾರಿ, ಬಿಬಿಎಂಪಿ ಸದಸ್ಯರಾದ ಮಂಜುನಾಥ ರೆಡ್ಡಿ, ಉದಯಶಂಕರ್, ತೋಟಗಾರಿಕಾ ಇಲಾಖೆ ನಿರ್ದೇಶಕ ಎಸ್.ಪಿ.ಷಡಕ್ಷರಿಸ್ವಾಮಿ ಹಾಜರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com