
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಹಾಗೂ ಸದಸ್ಯರ ನಾಮ ನಿರ್ದೇಶನಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಸೋಮವಾರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಡಿ.ಎಚ್.ವಘೇಲಾ ಮತ್ತು ನ್ಯಾ.ರಾಮಮೋಹನ ರೆಡ್ಡಿ ಅವರಿದ್ದ ವಿಭಾಗೀಯ ಪೀಠ, ಯಾವ ರೀತಿಯ ಕೆಪಿಎಸ್‌ಸಿ ಇದು? ಅದರ ಅಧ್ಯಕ್ಷ, ಸದಸ್ಯರನ್ನು ನೇಮಿಸುವಾಗ ಸರ್ಕಾರಕ್ಕೆ ಕನಿಷ್ಠ ಕಾಳಜಿಯೂ ಬೇಡವೇ? ಇದೊಂದು ದುರದೃಷ್ಟದ ಸಂಗತಿ ಎಂದು ಸರ್ಕಾರದ ಕಾರ್ಯ ವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಅಧ್ಯಕ್ಷ ಮತ್ತು ಸದಸ್ಯರ ನಾಮ ನಿರ್ದೇಶನ ಮಾಡಲು ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರು ಸೂಕ್ತ ಮಾರ್ಗಸೂಚಿ ಹೊರಡಿಸಬೇಕೆಂದು ಕೋರಿ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು.
ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ಪ್ರೊ. ರವಿವರ್ಮಕುಮಾರ್ ವಾದ ಮಂಡಿಸಿ, ಕೆಪಿಎಸ್‌ಸಿಯಲ್ಲಿ ಈಗಗಲೇ 800 ಹುದ್ದೆಗಳು ಭರ್ತಿ ಆಗಬೇಕಿದ್ದು ಅಧ್ಯಕ್ಷರ ಹಾಗೂ ಸದಸ್ಯರ ನೇಮಕ ಅನಿವಾರ್ಯವಾಗಿದೆ. ಮಾರ್ಗಸೂಚಿಯ ಅನುಪಸ್ಥಿತಿಯಲ್ಲೂ ಹೇಗೆ ನೇಮಕ ಮಾಡಬೇಕೆಂಬುದರ ಕುರಿತು ಸುಪ್ರೀಂ ಕೋರ್ಟ್‌ನ ಆದೇಶವಿದೆ.
ಇದನ್ನು ಅರ್ಜಿದಾರರು ಪರಿಗಣಿಸಿಲ್ಲ. ಅಲ್ಲದೇ ಈ ವಿಷಯ ರಾಜ್ಯಪಾಲರ ಮುಂದಿದ್ದು, ಸ್ವತಃ ರಾಜ್ಯಪಾಲರೇ ನಾಮನಿರ್ದೇಶನಗೊಂಡ ಅಧ್ಯಕ್ಷ ಹಾಗೂ ಸದಸ್ಯರ ಸಮಗ್ರ ಮಾಹಿತಿ ತರಿಸಿಕೊಂಡಿರುವುದಾಗಿ ಪೀಠದ ಗಮನಕ್ಕೆ ತಂದರು.
ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರರ ಪರ ಹಿರಿಯ ವಕೀಲಯ ಉದಯ್ ಹೊಳ್ಳ, ಕೆಪಿಎಸ್‌ಸಿ ನೇಮಕ ವಿಚಾರದಲ್ಲಿ ಭಾರಿ ಭ್ರಷ್ಟಚಾರ ಹಾಗೂ ಹಗರಣಗಳು ವರದಿ ಆಗುತ್ತಲೇ ಇದೆ. ನೇಮಕ ಪಾರದರ್ಶಕವಾಗಿರಲು ಮಾರ್ಗಸೂಚಿ ಅಳವಡಿಕೆ ಅನಿವಾರ್ಯವಾಗಿದೆ. ಕೆಪಿಎಸ್‌ಸಿಗೆ ಪದಾಧಿಕಾರಿಗಳನ್ನು ನೇಮಿಸುವಾಗ ವಿಚಕ್ಷಣಾ ಹಾಗೂ ಲೋಕಾಯುಕ್ತರಿಂದ ಒಪ್ಪಿಗೆ ಪಡೆಯಬೇಕು ಎಂೂ ನಿಯಮವಿದೆ ಎಂದು ವಾದಿಸಿದರು.
ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, ಅರ್ಜಿಯಲ್ಲಿ ಪ್ರತಿವಾದಿಯಾಗಿದ್ದ ರಾಜ್ಯ ಪಾಲರನ್ನು ಪಟ್ಟಿಯಿಂದ ತೆಗೆದು ಹಾಕಿ ವಿಚಾರಣೆಯನ್ನು ಫೆ.16ಕ್ಕೆ ಮುಂದೂಡಿದೆ.
ರಾಜ್ಯ ಸಚಿವ ಸಂಪುಟದ ನಿರ್ಧಾರವೇನು?
ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನಕ್ಕೆ ವಿಧಾನ ಪರಿಷತ್‌ನ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಹಾಗೂ ಸದಸ್ಯ ಸ್ಥಾನಕ್ಕೆ ಡಾ.ನಾಗಬಾಯಿ ಬಿ.ಬುಲ್ಲಾ, ಡಾ.ರವಿಕುಮಾರ್, ಸೈಯದ್ ಉಲ್ತಾಫ್ ಹುಸೇನ್, ರಘುನಂದನ್ ರಾಮಣ್ಣ, ಪ್ರೊ.ಎಚ್.ಗೋವಿಂದಯ್ಯ, ಮೃತ್ಯುಂಜಯ ಮತ್ತು ಮೈಕಲ್ ಸೈಮನ್ ಬಾರೆಟ್ಟು ಅವರ ಹೆಸರನ್ನು ನಾಮನಿರ್ದೇಶನ ಮಾಡಲು ತೀರ್ಮಾನಿಸಲಾಗಿತ್ತು.
Advertisement