
ನವದೆಹಲಿ: ಸುನಂದಾ ಪುಷ್ಕರ್ ಹತ್ಯಾ ಪ್ರಕರಣ ಹೈ ಪ್ರೊಫೈಲ್ ಕೇಸ್ ಆಗಿದ್ದು, ತನಿಖಾಧಿಕಾರಿಗಳು ನಿಧಾನವಾಗಿ ಹಾಗೂ ಜಾಗರೂಕತೆಯಿಂದ ತನಿಖೆ ನಡೆಸಬೇಕಿದೆ ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಆಗ್ರಹಿಸಿದ್ದಾರೆ.
ಕೇಂದ್ರ ಮಾಜಿ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಸಾವು ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣದ ಕುರಿತಂತೆ ಹೇಳಿಕೆ ನೀಡಿರುವ ಸುಬ್ರಹ್ಮಣ್ಯನ್ ಸ್ವಾಮಿ ಅವರು, ಸುನಂದಾ ಸಾವು ನಿಗೂಢವಾಗಿದೆ. ಹೀಗಾಗಿ ಪೊಲೀಸರು ಅವಸರ ಪಡದೆ ನಿಧಾನಗತಿಯಿಂದ ಮತ್ತು ಬಹಳ ಎಚ್ಚರಿಕೆಯಿಂದ ತನಿಖೆ ನಡೆಸಬೇಕಿದೆ ಎಂದರು.
ಅಂದಿನ ಯುಪಿಎ ಸರ್ಕಾದೊಂದಿಗೆ ಕೆಲ ಪೊಲೀಸರು ಶಾಮೀಲಾಗಿ ಶಶಿತರೂರ್ ಅವರನ್ನು ಪ್ರಶ್ನಿಸಿರಲಿಲ್ಲ. ಪ್ರಕರಣದಲ್ಲಿ ಮತ್ತಷ್ಟು ಗಣ್ಯರು ಭಾಗಿಯಾಗಿರುವ ಸಾಧ್ಯತೆ ಇದ್ದು, ತನಿಖೆಯಲ್ಲಿ ಬಹಳಷ್ಟು ಒತ್ತಡಗಳಿರುವುದರಿಂದ ತನಿಖಾಧಿಕಾರಿಗಳು ಪ್ರಕರಣವನ್ನು ಸೂಕ್ಷ್ಮವಾಗಿ ತನಿಖೆ ನಡೆಸಿ ಸುನಂದಾ ಸಾವಿನ ನಿಗೂಢಗಳನ್ನು ಹೊರಹಾಕಬೇಕಿದೆ ಎಂದು ಸ್ವಾಮಿ ಹೇಳಿದ್ದಾರೆ.
ಸುನಂದಾ ಸಾವು ಹೇಗಾಗಿದೆ ಹಾಗೂ ಅವರು ಕೊನೆಯದಾಗಿ ನೋಡಿರುವ ವ್ಯಕ್ತಿ ಅವರ ಪತಿ ಶಶಿ ತರೂರ್ ಅವರೇ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ ಆದರೆ ಅವರನ್ನು ಹತ್ಯೆ ಮಾಡಿದವರು ಯಾರು ಎಂಬುದನ್ನು ಪತ್ತೆ ಹಚ್ಚಬೇಕಿದ್ದು, ಹೆಚ್ಚಿನ ತನಿಖೆಗಾಗಿ ಪೊಲೀಸರು ಶಶಿ ತರೂರ್ ಅವರನ್ನು ಬಂಧಿಸುವ ಅಗತ್ಯವಿದೆ ಎಂದಿದ್ದಾರೆ.
Advertisement