ಲಾಲಾ ಲಜಪತ್ ರಾಯ್ ಪ್ರತಿಮೆಗೆ ಬಿಜೆಪಿ ಶಾಲ್: ವಿವಾದ ಸೃಷ್ಟಿಸಿದ ಕಿರಣ್ ಬೇಡಿ

ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಅವರು ಬುಧವಾರ ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್ ರಾಯ್ ಅವರ ಪ್ರತಿಮೆಗೆ ಪಕ್ಷದ ವಸ್ತ್ರ ಹಾಕುವ ಮೂಲಕ ಹೊಸ ವಿವಾದಕ್ಕೆ ಕಾರಣವಾಗಿದ್ದಾರೆ.
ಕಿರಣ್ ಬೇಡಿ
ಕಿರಣ್ ಬೇಡಿ

ನವದೆಹಲಿ: ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಅವರು ಬುಧವಾರ ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್ ರಾಯ್ ಅವರ ಪ್ರತಿಮೆಗೆ ಪಕ್ಷದ ವಸ್ತ್ರ ಹಾಕುವ ಮೂಲಕ ಹೊಸ ವಿವಾದಕ್ಕೆ ಕಾರಣವಾಗಿದ್ದಾರೆ.

ನಾಮಪತ್ರ ಸಲ್ಲಿಕೆಗೂ ಮುನ್ನ ಕಿರಣ್ ಬೇಡಿ ಅವರು ಕೃಷ್ಣ ನಗರದಲ್ಲಿರುವ ಲಾಲಾ ಲಜಪತ್ ರಾಯ್ ಅವರ ಪ್ರತಿಮೆಯನ್ನು ತಾವು ಧರಿಸಿದ್ದ ಪಕ್ಷದ ಶಾಲ್‌ನಿಂದಲೇ ಸ್ವಚ್ಛಗೊಳಿಸಿ, ಪ್ರತಿಮೆಯ ಕೊರಳಿಗೆ ಹಾಕಿದರು. ಕೆಲ ಕ್ಷಣಗಳ ಬಳಿಕ ಎಚ್ಚೆತ್ತುಕೊಂಡ ಬೇಡಿ, ಕೂಡಲೇ ಅದನ್ನು ತೆಗೆದರು.

ಕಿರಣ್ ಬೇಡಿ ಅವರ ಈ ನಡೆ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಆಮ್ ಆದ್ಮಿ ಪಕ್ಷ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು, ಸ್ವಾತಂತ್ರ್ಯ ಹೋರಾಟಗಾರರನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದಿದ್ದಾರೆ. ಅಲ್ಲದೆ ಕಿರಣ್ ಬೇಡಿ ಅವರು ಸ್ವಾತಂತ್ರ್ಯ ಹೋರಾಟಗಾರರನ್ನು ಕೇಸರಿಕರಣಗೊಳಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಕನಿಷ್ಠ ಪಕ್ಷ ಸ್ವಾತಂತ್ರ್ಯ ಹೋರಾಟಗಾರರನ್ನಾದರೂ ಬಿಡಿ. ಅವರನ್ನು ಕೇಸರಿಕರಣ ಮಾಡಬೇಡಿ. ಅವರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಅವರು ಈ ದೇಶಕ್ಕೆ ಸೇರಿದವರು. ನಾವು ಅವರನ್ನು ಕಾಂಗ್ರೆಸ್, ಬಿಜೆಪಿ ಎಂದು ವಿಂಗಡಿಸಬಾದರು ಎಂದು ಕೇಜ್ರಿವಾಲ್ ಹೇಳಿದ್ದಾರೆ.

ನಿವೃತ್ತ ಐಪಿಎಸ್ ಅಧಿಕಾರಿ ರೋಡ್ ಶೋ ನಡೆಸುವ ಮುನ್ನ ಕೃಷ್ಣನಗರದ ಕೆಲವು ಟೀ ವ್ಯಾಪಾರಿಗಳನ್ನು ಮತ್ತು ದಿನಪತ್ರಿಕೆ ವಿತರಕರನ್ನು ಭೇಟಿ ಮಾಡಿ, ಅವರ ಸಮಸ್ಯೆಗಳನ್ನು ಆಲಿಸಿದರು. ದೆಹಲಿಯ ಕೃಷ್ಣನಗರದಿಂದ ಕಣಕ್ಕಿಳಿದಿರುವ ಕಿರಣ್ ಬೇಡಿ ಅವರು ಇಂದು ಭರ್ಜರಿ ರೋಡ್ ಶೋ ನಡೆಸುವ ಮೂಲಕ ತಮ್ಮ ನಾಮಪತ್ರ ಸಲ್ಲಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com