
ನವದೆಹಲಿ: ದೆಹಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಇಬ್ಬರೂ ಅವಕಾಶವಾದಿಗಳು ಎಂದು ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಅಜಯ್ ಮಾಕೇನ್ ಅವರು ಬುಧವಾರ ಆರೋಪಿಸಿದ್ದಾರೆ.
ಅಜಯ್ ಮಾಕೇನ್ ಅವರು ಇಂದು ಸದರ್‌ಬಜಾರ್ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮಾಕೇನ್, ಬಿಜೆಪಿ ಮತ್ತು ಆಮ್ ಆದ್ಮಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕಿರಣ್ ಬೇಡಿ ಮತ್ತು ಕೇಜ್ರಿವಾಲ್ ಇಬ್ಬರೂ ಅವಕಾಶವಾದಿಗಳು. ಈ ಇಬ್ಬರೂ ತಮ್ಮ ರಾಜಕೀಯ ಮಹತ್ವಾಕಾಂಕ್ಷೆ ಈಡೇರಿಸಿಕೊಳ್ಳಲು ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರನ್ನು ಮತ್ತು ಭ್ರಷ್ಟಾಚಾರ ವಿಷಯವನ್ನು ಬಳಸಿಕೊಂಡಿದ್ದಾರೆ ಎಂದು ಮಾಕೇನ್ ಆರೋಪಿಸಿದರು.
ಎಎಪಿ ಮತ್ತು ಬಿಜೆಪಿ ಎರಡು ಒಂದೇ. ಕಿರಣ್ ಬೇಡಿ ಸೇರಿದಂತೆ ಅಣ್ಣಾ ಹಜಾರೆ ಅವರೊಂದಿಗೆ ಇದ್ದ ಹಲವರು ಬಿಜೆಪಿ ಸೇರಿದ್ದಾರೆ. ಮುಂದೊಂದು ದಿನ ಆಮ್ ಆದ್ಮಿ ಪಕ್ಷ ಬಿಜೆಪಿಯೊಂದಿಗೆ ವಿಲಿನವಾದರೂ ಅಚ್ಚರಿ ಪಡಬೇಕಿಲ್ಲ ಎಂದು ಅಜಯ್ ಮಾಕೇನ್ ಹೇಳಿದ್ದಾರೆ.
ಕಿರಣ್ ಬೇಡಿ ಅವರು ಒಬ್ಬ ಉತ್ತಮ ಪೊಲೀಸ್ ಅಧಿಕಾರಿ ನಿಜ. ಆದರೆ ಆಡಳಿತ ನಡೆಸುವುದು ಅಷ್ಟು ಸುಲಭವಲ್ಲ. ಇದಕ್ಕೆ ಭಿನ್ನವಾದ ಸಾಮರ್ಥ್ಯ ಮತ್ತು ಅಪಾರ ತಾಳ್ಮೆ ಬೇಕಾಗುತ್ತದೆ ಎಂದಿದ್ದಾರೆ. ಇದೇ ವೇಳೆ ಇತ್ತೀಚಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮಾಜಿ ಕೇಂದ್ರ ಸಚಿವೆ ಕೃಷ್ಣ ತೀರಥ್ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಮಾಕೇನ್, ತೀರಥ್ ಮೊದಲ ದರ್ಜೆಯ ಅವಕಾಶವಾದಿ ಎಂದು ಟೀಕಿಸಿದರು.
Advertisement