ಕಿರಣ್ ಬೇಡಿಯಂತಹ ಪ್ರಾಮಾಣಿಕರು ಸಿಎಂ ಆಗಬೇಕು: ಶಾಂತಿಭೂಷಣ್

ದೆಹಲಿ ವಿಧಾನಸಭಾ ಚುನಾವಣೆಯ ಬಿಸಿ ಹೆಚ್ಚಾಗಿದ್ದು, ಆಮ್ ಆದ್ಮಿ ಪಕ್ಷ(ಎಎಪಿ) ಮತ್ತು ಬಿಜೆಪಿ ನಡುವೆ ವಾಗ್ವಾದ...
ಶಾಂತಿ ಭೂಷಣ್
ಶಾಂತಿ ಭೂಷಣ್

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ ಕಾವು ತಾರಕಕ್ಕೇರಿದ್ದು, ಆಮ್ ಆದ್ಮಿ ಪಕ್ಷ(ಎಎಪಿ) ಮತ್ತು ಬಿಜೆಪಿ ನಡುವೆ ವಾಗ್ವಾದ ನಡೆಯುತ್ತಿದ್ದರೆ, ಇತ್ತ ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದ ಶಾಂತಿಭೂಷಣ್ ಬಿಜೆಪಿ ಸಿಎಂ ಅಭ್ಯರ್ಥಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಿರಣ್ ಬೇಡಿಯಂತಹ ಪ್ರಾಮಾಣಿಕರು ದೆಹಲಿ ಮುಖ್ಯಮಂತ್ರಿಯಾಗಬೇಕು ಎಂದು ಖ್ಯಾತ ಹಿರಿಯ ವಕೀಲ ಶಾಂತಿ ಭೂಷಣ್ ಗುರುವಾರ ಹೇಳಿದ್ದಾರೆ.

ಕಿರಣ್ ಬೇಡಿ ದೆಹಲಿ ಮುಖ್ಯಮಂತ್ರಿಯಾದರೆ ನನಗೆ ಬಹಳ ಸಂತೋಷವಾಗುತ್ತದೆ ಎಂದ ಅವರು, ಕಿರಣ್ ಬೇಡಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವ ಬಿಜೆಪಿ ನಿರ್ಧಾರ ಸ್ವಾಗತಾರ್ಹ ಎಂದು ಅವರು ತಿಳಿಸಿದ್ದಾರೆ.

ಕಿರಣ್ ಬೇಡಿ ಭ್ರಷ್ಟಾಚಾರದ ವಿರುದ್ಧ ಹೋರಾಡಿದವರು. ಅಲ್ಲದೇ, ಸರ್ಕಾರದಲ್ಲಿ ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು. ಈಗಲೂ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಅಣ್ಣಾ ಹಜಾರೆ ಆಂದೋಲನದ ಬಲ ಗುರುತಿಸಿದ ಬಿಜೆಪಿ, ಕಿರಣ್ ಬೇಡಿ ಅವರನ್ನು ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ ಎಂದು ಅವರು ಹೇಳಿದ್ದಾರೆ.

ಎಎಪಿಯಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೇಳಲಾಗುವುದಿಲ್ಲ. ಎಎಪಿಯಲ್ಲಿ ಇನ್ನು ಸರಿಪಡಿಸಿಕೊಳ್ಳುವ ಅನೇಕ ಅಂಶಗಳಿದ್ದು, ಎಎಪಿಗೆ ನಿರ್ದೇಶನದ ಅಗತ್ಯವಿದೆ. ರಾಜಕೀಯ ವ್ಯವಸ್ಥೆಯಲ್ಲಿರುವ ಒತ್ತಡವನ್ನು ಎಎಪಿ ದೂಡಬೇಕಿದೆ.

ಭ್ರಷ್ಟಾಚಾರದ ವಿರುದ್ಧವಾಗಿ ಎಎಪಿ ಪಕ್ಷ ಹುಟ್ಟಿಕೊಂಡಿದ್ದು, ಹಾಗಾಗಿ, ಭ್ರಷ್ಟಾಚಾರದ ವಿರೋಧಿ ಕಿರಣ್ ಬೇಡಿಯಂತಹ ಪ್ರಾಮಾಣಿಕರು ಮುಖ್ಯಮಂತ್ರಿಯಾದರೆ ಅದಕ್ಕೆ ಎಎಪಿ ಸಂತಸ ಪಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪೊಲೀಸ್ ಅಧಿಕಾರಿಯಾಗಿ ಜನ ಮೆಚ್ಚುವಂತಹ ಕೆಲಸ ಮಾಡಿದ್ದು, ಮಹಿಳೆಯರಿಗಾಗಿಯೇ ಹೋರಾಡಿದಂತವರು. ಕಿರಣ್ ಬೇಡಿ ಮುಖ್ಯಮಂತ್ರಿಯಾದರೆ, ಒಳ್ಳೆ ಕೆಲಸ ಮಾಡುತ್ತಾರೆಂಬ ಭರವಸೆ ನನಗಿದೆ. ದೆಹಲಿಗೆ ಪ್ರಾಮಾಣಿಕ ಮುಖ್ಯಮಂತ್ರಿಗಿಂತ ಬೇರೇನು ಬೇಕಿಲ್ಲ ಎಂದು ತಿಳಿಸಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com