ಪಿಎಸ್‌ಐ ನೇಮಕ ಪ್ರಕ್ರಿಯೆ: ಆಮಿಷಗಳಿಗೆ ಒಳಗಾಗದಿರಿ

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತಿದ್ದು ಅಭ್ಯರ್ಥಿಗಳು...
ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ರಾಘವೇಂದ್ರ ಔರಾದ್ಕರ್
ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ರಾಘವೇಂದ್ರ ಔರಾದ್ಕರ್
Updated on

ಪೊಲೀಸ್ ಮಹಾ ನಿರ್ದೇಶಕ ರಾಘವೇಂದ್ರ ಔರಾದ್ಕರ್ ಮನವಿ

ಬೆಂಗಳೂರು:
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತಿದ್ದು ಅಭ್ಯರ್ಥಿಗಳು ಯಾವುದೇ ಗೊಂದಲ, ಆಮಿಷಗಳಿಗೆ ಒಳಗಾಗಬಾರದು ಎಂದು 'ಪೊಲೀಸ್ ನೇಮಕ ಮತ್ತು ತರಬೇತಿ' ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ರಾಘವೇಂದ್ರ ಔರಾದ್ಕರ್ ಹೇಳಿದರು.

ನಗರದ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸೈ ನೇಮಕ ಸಂಬಂಧ ಕೆಲವೆಡೆ ಕೆಲಸ ಕೊಡಿಸುವುದಾಗಿ ಹಣ ಸುಲಿಗೆ ಮಾಡುತ್ತಿರುವ ಬಗ್ಗೆ ಕೇಳಿ ಬಂದಿದೆ. ಕೆಲವು ಅಭ್ಯರ್ಥಿಗಳು ತಾವು ಉತ್ತರ ಪತ್ರಿಕೆಯನ್ನು ಖಾಲಿ ಬಿಟ್ಟಿದ್ದು ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುವುದಾಗಿ ಹೇಳಿಕೊಳ್ಳುತ್ತಿರುವ ಬಗ್ಗೆಯೂ ದೂರುಗಳು ಬಂದಿವೆ. ಯಾವುದೇ ಅಕ್ರಮಕ್ಕೆ ಅವಕಾಶವಿಲ್ಲ. ಸಹಿಷ್ಣುತೆ ಪರೀಕ್ಷೆ, ಲಿಖಿತ ಪರೀಕ್ಷೆ, ಮೌಖಿಕ ಪರೀಕ್ಷೆ ಹೀಗೆ ಪ್ರತಿಯೊಂದನ್ನು ವಿಡಿಯೋ ರೆಕಾರ್ಡಿಂಗ್ ಮಾಡಲಾಗುತ್ತಿದೆ. ಅನುಮಾನ ಇದ್ದವರು ನೇಮಕ ಘಟಕದ ಅಧಿಕಾರಿಗಳನ್ನು ಭೇಟಿ ಮಾಡಿ ಪ್ರಶ್ನಿಸಬಹುದು. ನೇಮಕ ಪ್ರಕ್ರಿಯೆ ಪಾರದರ್ಶಕವಾಗಿದ್ದು ಅಭ್ಯರ್ಥಿಗಳು ತಮ್ಮ ಮೆರಿಟ್ ಆಧಾರದ ಮೇಲೆ ಕೆಲಸ ಗಿಟ್ಟಿಸಿಕೊಳ್ಳುತ್ತಾರೆ ಎಂದರು.

ಖಾಲಿ ಉತ್ತರ ಪತ್ರಿಕೆ ಪರಿಗಣನೆ ಇಲ್ಲ
ಪರೀಕ್ಷೆ ವೇಳೆ ಕೆಲ ಅಭ್ಯರ್ಥಿಗಳು ಉತ್ತರ ಪತ್ರಿಕೆಯನ್ನು ಖಾಲಿ ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಯಾವುದೇ ಅಭ್ಯರ್ಥಿ 10 ಕ್ಕಿಂತ ಕಡಿಮೆ ಪ್ರಶ್ನೆಗಳಿಗೆ ಉತ್ತರಿಸಿದ್ದಲ್ಲಿ ಅವರ ಪತ್ರಿಕೆಗಳನ್ನು ಪರೀಕ್ಷಾ ಕೊಠಡಿ ಸಂವೀಕ್ಷಕರು ಪ್ರತ್ಯೇಕ ಲಕೋಟೆಯಲ್ಲಿ ನೇಮಕ ಸಮಿತಿಗೆ ಸಲ್ಲಿಸಿರುತ್ತಾರೆ. ಅದೂ ವಿಡಿಯೋ ಆಗಿರುತ್ತದೆ. ಈ ಮೂಲಕ ಕಡಿಮೆ ಪ್ರಶ್ನೆಗಳಿಗೆ ಉತ್ತರಿಸಿದವರ ಪತ್ರಿಕೆಗಳನ್ನು ಪ್ರತ್ಯೇಕಿಸಿ ಅದನ್ನು ಪರಿಗಣಿಸಲಾಗುವುದಿಲ್ಲ ಎಂದರು.

285 ಖಾಲಿ ಹುದ್ದೆಗಳ ಪೈಕಿ 233 ಸಿವಿಲ್ ಹಾಗೂ 52 ಸಿಎಆರ್ ಹಾಡೂ ಡಿಎಆರ್ ಎಸ್ಸೈ ಹುದ್ದೆಗಳಿವೆ. ಇದಕ್ಕೆ 85,942 ಅರ್ಜಿಗಳು ಬಂದಿದ್ದವು. ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷೆಯಲ್ಲಿ 35,526 ಮಂದಿ ಮಾತ್ರ ಉತ್ತೀರ್ಣರಾಗಿ ಲಿಖಿತ ಪರೀಕ್ಷೆಗೆ ಅರ್ಹತೆ ಗಿಟ್ಟಿಸಿದ್ದರು. 2015 ಜ.11ರಂದು ನಡೆದ ಪರೀಕ್ಷೆಗೆ 1402 ಮಂದಿ ಗೈರು ಹಾಜರಾಗಿದ್ದು ಉಳಿದವರು ಪರೀಕ್ಷೆ ಬರೆದಿದ್ದಾರೆ. ಮೆರಿಟ್ ಹಾಗೂ ಸರ್ಕಾರದ ಮೀಸಲು ನಿಯಮದಂತೆ ಅರ್ಹರನ್ನು ಪ್ರತಿ ಹುದ್ದೆಗೆ 1:2 ಅನುಪಾತದಂತೆ ಮೌಖಿಕ ಪರೀಕ್ಷೆಗೆ ಕರೆಯಲಾಗುತ್ತಿದೆ. ಮೌಖಿಕ ಪರೀಕ್ಷೆಯಲ್ಲಿ 10 ಅಂಕಗಳು ಮಾತ್ರ ಇವೆ. ಹೀಗಾಗಿ, ಅಕ್ರಮಕ್ಕೆ ಅವಕಾಶ ಇಲ್ಲ ಎಂದರು.

150 ಅಭ್ಯರ್ಥಿಗಳಿಂದ ಆಕ್ಷೇಪ
ಎಸ್ಸೈ ಪರೀಕ್ಷೆ ಬಳಿಕ ಪ್ರಶ್ನೆ ಪತ್ರಿಕೆಗೆ ಸಂಬಂಧಿಸಿದ 1 ವಾರದೊಳಗೆ ಆಕ್ಷೇಪಣೆ ಅರ್ಜಿ ನೀಡುವಂತೆ ಕೋರಲಾಗಿತ್ತು. ಅದರಂತೆ ಒಟ್ಟು 150 ಆಕ್ಷೇಪಣೆ ಅರ್ಜಿಗಳು ಬಂದಿವೆ. ಈ ಬಗ್ಗೆ ಪರೀಶೀಲಿಸಲು ಅಧಿಕಾರಿಗಳು ಹಾಗೂ ಶಿಕ್ಷಣ ತಜ್ಞರ ನೆರವು ಕೋರಲಾಗಿದೆ. ಗ್ರಂಥಗಳು, ಪೂರಕ ಪುಸ್ತಕಗಳ ಆಧಾರದ ಮೇಲೆ ಪ್ರಶ್ನೆಗಳ ಸರಿ ತಪ್ಪು ನಿರ್ಧರಿಸಲಾಗುವುದು ಎಂದು ನೇಮಕ ಮತ್ತು ತರಬೇತಿ ವಿಭಾಗದ ಡಿಐಜಿ ಶಿವಕುಮಾರ್ ತಿಳಿಸಿದರು.

ಮೌಖಿಕ ಪರೀಕ್ಷೆ
ಮೌಖಿಕ ಪರೀಕ್ಷೆಯಲ್ಲಿ ಎಡಿಜಿಪಿ, ಐಜಿಪಿ ಮಟ್ಟ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಪ್ರತಿನಿಧಿ, ಅಲ್ಪಸಂಖ್ಯಾತ ಇಲಾಖೆ, ಹಿಂದುಳಿದ ವರ್ಗ ಇಲಾಖೆ ಪ್ರತಿನಿಧಿ ಹಾಗೂ ಮನೋತಜ್ಞರು ಇರುತ್ತಾರೆ. ಈ ಮೂಲಕ ಬುದ್ದಿವಂತಿಕೆ, ಮನೋ ಸಾಮರ್ಥ್ಯ ಅಳೆಯಲಾಗುತ್ತದೆ. ಅವರು ನೀಡುವ ಅಂಕಗಳನ್ನು ಗುಪ್ತವಾಗಿ ಪ್ರತ್ಯೇಕವಾಗಿ ಲಕೋಟೆಯಲ್ಲಿಟ್ಟು ಬಳಿಕವಷ್ಟೇ ತೆರೆಯಲಾಗುತ್ತದೆ. ಈ ಪ್ರಕ್ರಿಯೆ ಕೂಡ ವಿಡಿಯೋ ಚಿತ್ರೀಕರಣ ನಡೆಯಲಿದೆ. ಮೌಖಿಕ ಪರೀಕ್ಷೆಯಲ್ಲಿ ತಾವು ಸರಿ ಉತ್ತರ ನೀಡಿದರೂ ಅಂಕ ನೀಡಿಲ್ಲ ಎನ್ನುವ ಅಸಮಾಧಾವನವಿದ್ದರೆ ಅದಕ್ಕೂ ವಿಡಿಯೋ ಸಿಡಿ ಪರಿಶೀಲಿಸಲಾಗುತ್ತದೆ ಎಂದು ಎಡಿಜಿಪಿ ರಾಘವೇಂದ್ರ ಔರಾದ್ಖರ್ ಹೇಳಿದರು.

2 ಗ್ರೇಸ್ ಅಂಕ
ಪ್ರಶ್ನೆ ಪತ್ರಿಕೆ ತಯಾರಿಯಲ್ಲಿ ಉಂಟಾದ ತಪ್ಪಿನಿಂದ ಎರಡನೇ ಪತ್ರಿಕೆಯಲ್ಲಿ ಎರಡು ಪ್ರಶ್ನೆಗಳು ತಪ್ಪಾಗಿವೆ. ಹೀಗಾಗಿ, ಅದಕ್ಕಾಗಿ ಹೆಚ್ಚುವರಿಯಾಗಿ 2 ಗ್ರೇಸ್ ಅಂಕಗಳನ್ನು ನೀಡಲಾಗಿದೆ.

ಶಿವಕುಮಾರ್
ನೇಮಕ ಮತ್ತು ತರಬೇತಿ ವಿಭಾಗದ ಡಿಐಜಿ


ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com