ಏರ್‌ಏಷ್ಯಾ ದುರಂತ: ಪತನಕ್ಕೂ ಮುನ್ನ ಸಹ ಪೈಲಟ್‌ ವಿಮಾನ ಚಾಲನೆ

ಏರ್‌ಏಷ್ಯಾ ವಿಮಾನ
ಏರ್‌ಏಷ್ಯಾ ವಿಮಾನ

ಜಕಾರ್ತಾ: ಕಳೆದ ಡಿಸೆಂಬರ್‌ 28ರಂದು ಜಾವಾ ಸಮುದ್ರದಲ್ಲಿ ಪತನಗೊಂಡ ಏರ್‌ಏಷ್ಯಾ ವಿಮಾನ ದುರಂತಕ್ಕೂ ಮುನ್ನ ಫ್ರೆಂಚ್‌ ಸಹ ಪೈಲಟ್‌ ವಿಮಾನ ಚಾಲನೆ ಮಾಡುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. 

ವಿಮಾನದ ಕಾಕ್‌ಪಿಟ್‌ ವಾಯ್ಸ್‌ ರೆಕಾರ್ಡರ್‌ (ಪೈಲಟ್‌ ಕೋಣೆಯ ಧ್ವನಿಮುದ್ರಕ) ಮತ್ತು ಫ್ಲೈಟ್‌ ಡಾಟಾ ರೆಕಾರ್ಡರ್‌ನಲ್ಲಿ (ವಿಮಾನ ದತ್ತಾಂಶ ದಾಖಲು ಉಪಕರಣ) ದಾಖಲಾಗಿರುವ ಮಾಹಿತಿಗಳ ಪ್ರಕಾರ ಘಟನೆ ಸಂಭವಿಸುವ ವೇಳೆ ಸಹ ಪೈಲಟ್‌ ವಿಮಾನ ಚಾಲನೆ ಮಾಡುತ್ತಿದ್ದರೆಂಬುದು ತಿಳಿದುಬಂದಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

‘ಘಟನೆ ಸಂಭವಿಸಿದ ಸಂದರ್ಭದಲ್ಲಿ ಸಹ ಪೈಲಟ್‌ ಕಾಕ್‌ಪಿಟ್‌ನ ಬಲಭಾಗದಲ್ಲಿ ಕುಳಿತು ವಿಮಾನ ಚಾಲನೆ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ’ ಎಂದು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಸಮಿತಿಯ (ಎನ್‌ಟಿಎಸ್‌ಸಿ) ತನಿಖಾಧಿಕಾರಿ ಮರ್ಡ್ಜೊನೊ ಸಿಸ್ವೊಸುವರ್ನೊ ತಿಳಿಸಿದ್ದಾರೆ.

‘ಆ ವೇಳೆ ವಿಮಾನದ ಮುಖ್ಯ ಪೈಲಟ್‌ ಕಾಕ್‌ಪಿಟ್‌ನ ಎಡಭಾಗದಲ್ಲಿ ಕುಳಿತು ಚಾಲನೆಯ ನಿಯಂತ್ರಣ ಮಾಡುತ್ತಿದ್ದರು. ವಿಮಾನ ಪಥನಗೊಳ್ಳುವ ಕೊನೆ ಗಳಿಗೆಯವರೆಗೂ ಮುಖ್ಯ ಪೈಲಟ್‌ ವಿಮಾನ ನಿಯಂತ್ರಣಕ್ಕೆ ತರಲು ಪ್ರಯತ್ನಿಸಿರುವುದು ಕಪ್ಪುಪೆಟ್ಟಿಯಲ್ಲಿ ದಾಖಲಾಗಿರುವ ಮಾಹಿತಿಗಳಿಂದ ಸ್ಪಷ್ಟವಾಗಿದೆ’ ಎಂದು ಅವರು ಹೇಳಿದ್ದಾರೆ.

ಡಿಸೆಂಬರ್‌ 28ರಂದು ಇಂಡೊನೇಷ್ಯಾದ ಸುರಬಯಾದಿಂದ ಸಿಂಗಪುರಕ್ಕೆ ಹೋಗುತ್ತಿದ್ದ ಏರ್‌ಏಷ್ಯಾ  ಸಂಸ್ಥೆಯ ‘ಏರ್‌ಬಸ್‌– ಎ320’ ವಿಮಾನ ಜಾವಾ ಸಮುದ್ರದಲ್ಲಿ ನಿಗೂಢವಾಗಿ ಪತನಗೊಂಡಿತ್ತು. ವಿಮಾನದಲ್ಲಿ 162 ಪ್ರಯಾಣಿಕರಿದ್ದರು. ಘಟನೆಯಲ್ಲಿ ಎಲ್ಲರೂ ಮೃತಪಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com