
ನವದೆಹಲಿ: ಅಮೆರಿಕಾದ ಭಾರತೀಯ ರಾಯಭಾರಿಯಾಗಿದ್ದ ಜೈ ಶಂಕರ್ ಅವರು ಭಾರತದ ಮುಂದಿನ ವಿದೇಶಾಂಗ ಕಾರ್ಯದರ್ಶಿಯಾಗಿ ಗುರುವಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಈ ಕುರಿತಂತೆ ಸಂತಸ ವ್ಯಕ್ತಪಡಿಸಿರುವ ಜೈ ಶಂಕರ್ ಅವರು, ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿರುವುದಕ್ಕೆ ಬಹಳ ಸಂತೋಷವಾಗುತ್ತಿದ್ದು, ಇದೊಂದು ದೊಡ್ಡ ಜವಾಬ್ದಾರಿಯುತ ಕೆಲಸವಾಗಿದೆ. ನನ್ನ ಕೆಲಸವನ್ನು ನಾನು ಗೌರವಿಸುತ್ತೇನೆ ಮುಂದಿನ ದಿನಗಳಲ್ಲಿ ಉತ್ತಮವಾಗಿ ಕರ್ತವ್ಯ ನಿಭಾಯಿಸುವುದರತ್ತ ಕಾರ್ಯಪ್ರವೃತ್ತನಾಗುತ್ತೇನೆ ಎಂದು ಹೇಳಿದ್ದಾರೆ.
ಗಣರಾಜ್ಯೋತ್ಸವದ ದಿನದಂದು ಭಾರತಕ್ಕೆ ಅತಿಥಿಯಾಗಿ ಆಗಮಿಸಿದ್ದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿದ್ದರು. ನಂತರ ಅಮೆರಿಕ ಹಾಗೂ ಭಾರತ ನಡುವಿನ ಒಪ್ಪಂದಗಳ ಕುರಿತಂತೆ ಸುದ್ದಿಗೋಷ್ಟಿ ನಡೆಸಿದ್ದರು. ಒಬಾಮ ಭಾರತ ಪ್ರವಾಸದ ನಂತರ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಸುಜಾತಾ ಸಿಂಗ್ ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಗಿದೆ.
ಒಬಾಮಾರನ್ನು ಭಾರತಕ್ಕೆ ಕರೆತಲು ಜೈ ಶಂಕರ್ ಅವರ ಪಾತ್ರ ಇರುವುದಾಗಿ ಮೂಲಗಳು ತಿಳಿಸಿವೆ. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಂತಹ ಸಂದರ್ಭದಲ್ಲಿ ಸುಜಾತಾ ಸಿಂಗ್ ಅವರು ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರಕ್ಕೆ ಬಂದಿದ್ದರು. ಸುಜಾತ ಅವರ ಅಧಿಕಾರವಧಿ 2 ವರ್ಷ ಇದ್ದು, ಇನ್ನೂ ಆರು ತಿಂಗಳು ಅವಧಿ ಇರುವಂತೆಯೇ ಸುಜಾತ ಸಿಂಗ್ ಅವರ ಸ್ಥಾನಕ್ಕೆ ಜೈ ಶಂಕರ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು. ಕೇಂದ್ರ ಸರ್ಕಾರದ ಈ ದಿಢೀರ್ ನಿರ್ಧಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ.
Advertisement