ಮಿಶೆಲ್ ಚಿತ್ರ ಅಸ್ಪಷ್ಟವಾಗಿಲ್ಲ

ಸೌದಿಯ ಸರ್ಕಾರಿ ಸ್ವಾಮ್ಯದ ಟಿವಿ ಚಾನೆಲ್‍ವೊಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭೇಟಿ ವೇಳೆ ಪತ್ನಿ...
ಮಿಶೆಲ್ ಚಿತ್ರ ಅಸ್ಪಷ್ಟವಾಗಿಲ್ಲ

ರಿಯಾದ್/ಸೌದಿ ಅರೇಬಿಯಾ: ಸೌದಿಯ ಸರ್ಕಾರಿ ಸ್ವಾಮ್ಯದ ಟಿವಿ ಚಾನೆಲ್‍ವೊಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭೇಟಿ ವೇಳೆ ಪತ್ನಿ ಮಿಶೆಲ್‍ರ ಚಿತ್ರವನ್ನು ಅಸ್ಪಷ್ಟ ಮಾಡಿ ತೋರಿಸಿದೆ ಎಂಬ ವಿಷಯ ಇದೀಗ ವಿವಾದ ಎಬ್ಬಿಸಿದೆ.

ಆದರೆ, ಈ ಸುದ್ದಿಯನ್ನು ಸೌದಿ ರಾಯಭಾರ ಕಚೇರಿ ತಳ್ಳಿಹಾಕಿದೆ. ಭಾರತ ಪ್ರವಾಸ ಮುಗಿಸಿದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತು ಪತ್ನಿ ಮಿಶೆಲ್ ಜತೆ ಸೌದಿ ಅರೇಬಿಯಾದ ರಿಯಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು.

ಈ ವೇಳೆ ಅವರನ್ನು ಸ್ವಾಗತಿಸಲು ಸೌದಿ ಅಧಿಕಾರಿಗಳ ತಂಡ ಬಂದಿತ್ತು. ಇದನ್ನು ಚಿತ್ರೀಕರಿಸಿ ಪ್ರಕಟಿಸುವ ವೇಳೆ ಸೌದಿಯ ಟಿವಿ ಚಾನೆಲ್‍ವೊಂದರಲ್ಲಿ ಮಿಶೆಲ್ ಇರುವ ಭಾಗವನ್ನು ಅಸ್ಪಷ್ಟ ಮಾಡಿ ಪ್ರಕಟಿಸಿದ್ದು, ಸಾಕಷ್ಟು ಟೀಕೆಗೆ ಗುರಿಯಾಗಿತ್ತು.

ಭಾರತದಿಂದ ಹೊರಡುವ ವೇಳೆ ಮಿಶೆಲ್ ತಮ್ಮ ಮೊಣಕಾಲುಗಳಿಗಿಂತ ಸ್ವಲ್ಪ ಕೆಳಮಟ್ಟಕ್ಕೆ ಬರುವಂತಹ ಉಡುಪನ್ನು ಧರಿಸಿದ್ದರು. ಬಂದಿಳಿದ ಸ್ವಲ್ಪ ಸಮಯದ ಬಳಿಕ ಅವರು ಉದ್ದನೆಯ ಪ್ಯಾಂಟ್, ಉದ್ದನೆಯ, ಮಿರುಗುವ ಬಣ್ಣದ ಜಾಕೆಟ್ ಅನ್ನು ಧರಿಸಿದ್ದರು. ಆದರೆ, ಶಿರವಸ್ತ್ರವನ್ನು ಧರಿಸಿರಲಿಲ್ಲ.

ಇದು ಸೌದಿ ಉಡುಪು ನೀತಿಗೆ ವಿರುದ್ಧ ಎಂಬ ಕಾರಣಕ್ಕೆ ಮಿಶೆಲ್ ಕಾಣಿಸಿಕೊಳ್ಳುವ ಭಾಗವನ್ನು ಅಸ್ಪಷ್ಟ ಮಾಡಿ ಪ್ರಕಟಿಸಲಾಗಿತ್ತು ಎಂದು ಮಾಧ್ಯಮವೊಂದರಲ್ಲಿ ವರದಿಯಾಗಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೌದಿ ರಾಯಭಾರ ಕಚೇರಿ, ಇದು ಸುಳ್ಳು ವರದಿಯಾಗಿದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com