ಶಾಲಾ ಬಸ್ ಪಲ್ಟಿ 9 ಮಕ್ಕಳಿಗೆ ಗಾಯ

ಬಳ್ಳಾರಿ ರಸ್ತೆ ಜಕ್ಕೂರು ಮುಖ್ಯರಸ್ತೆಯಲ್ಲಿ ಗುರುವಾರ ಮಧ್ಯಾಹ್ನ ಚಾಲಕನ ನಿಯಂತ್ರಣ...
ಶಾಲಾ ಬಸ್ ಪಲ್ಟಿಯಾಗಿ 9 ವಿದ್ಯಾರ್ಥಿಗಳಿಗೆ ಗಾಯ
ಶಾಲಾ ಬಸ್ ಪಲ್ಟಿಯಾಗಿ 9 ವಿದ್ಯಾರ್ಥಿಗಳಿಗೆ ಗಾಯ

ಬೆಂಗಳೂರು: ಬಳ್ಳಾರಿ ರಸ್ತೆ ಜಕ್ಕೂರು ಮುಖ್ಯರಸ್ತೆಯಲ್ಲಿ ಗುರುವಾರ ಮಧ್ಯಾಹ್ನ ಚಾಲಕನ ನಿಯಂತ್ರಣ ಕಳೆದುಕೊಂಡ ಶಾಲಾ ಬಸ್ ಪಲ್ಟಿಯಾಗಿ 9 ವಿದ್ಯಾರ್ಥಿಗಳು ಹಾಗೂ ಒಬ್ಬ ಸಹಾಯಕ ಗಾಯಗೊಂಡಿದ್ದಾನೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬೈಪಾಸ್ ರಸ್ತೆಯಲ್ಲಿರುವ ವಿದ್ಯಾಶಿಲ್ಪ ಅಕಾಡೆಮಿಗೆ ಸೇರಿದ ಶಾಲಾ ಬಸ್ ಪ್ರಾಥಮಿಕ ಶಾಲೆಯ 20 ವಿದ್ಯಾರ್ಥಿಗಳನ್ನು ಕರೆದುಕೊಂಡು ಮನೆಗೆ ಡ್ರಾಪ್ ಮಾಡಲು ಹೋಗುತ್ತಿತ್ತು. ಮಧ್ಯಾಹ್ನ 12.30ರ ಸುಮಾರಿಗೆ ಜಕ್ಕೂರು ಮುಖ್ಯರಸ್ತೆಗೆ ತಿರುವು ತೆಗೆದುಕೊಳ್ಳುತ್ತಿದ್ದಾಗ ಬಸ್ ವೇಗವಾಗಿದ್ದರಿಂದ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕದ ಮೇಲೆ ಹತ್ತಿ ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಭವಿಸಿದಾಗ ಬಸ್‍ನಲ್ಲಿ 20 ವಿದ್ಯಾರ್ಥಿಗಳು, ಸಹಾಯಕ ಇದ್ದರು. ದಾರಿ ಹೋಕರಿಬ್ಬರು ಬಸ್ ಬೀಳುತ್ತಿದ್ದಂತೆ ಮಕ್ಕಳ ಸಹಾಯಕ್ಕೆ ಓಡಿ ಬಂದಿದ್ದಾರೆ. ಬಸ್ ಮೇಲೆ ಹತ್ತಿ ಕಿಟಕಿ ಗಾಜುಗಳನ್ನು ಒಡೆದು ಒಳಗೆ ಸಿಲುಕಿದ್ದ ವಿದ್ಯಾರ್ಥಿಗಳನ್ನು ಹೊರಗೆ ಎಳೆದುಕೊಂಡಿದ್ದಾರೆ. ಗಾಯಗೊಂಡಿದ್ದ ಮಕ್ಕಳನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮೂವರು ವಿದ್ಯಾರ್ಥಿಗಳು ಮಾತ್ರ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಚಿಕಿತ್ಸೆ ಪಡೆದು ಮನೆಗೆ ಮರಳಿದರು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡ 9 ವಿದ್ಯಾರ್ಥಿಗಳ ಪೈಕಿ ಇಬ್ಬರು ವಿದ್ಯಾರ್ಥಿಗಳಿಗೆ ಹಾಗೂ ಸಹಾಯಕನಿಗೆ ಮಾತ್ರ ತಲೆಗೆ ಪೆಟ್ಟಾಗಿದ್ದು ಹೊಲಿಗೆ ಹಾಕಲಾಗಿದೆ. ಹೀಗಾಗಿ ಅವರನ್ನು ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಬೇಗ ಮನೆಗೆ ಹೊರಟಿದ್ದರು
ಪ್ರತಿದಿನ ಶಾಲೆ ಅವ„ 3.30ಕ್ಕೆ ಮುಗಿಯುತ್ತದೆ. ಆದರೆ, ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹೀಗಾಗಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಬೇಗ ಮನೆಗೆ ತೆರಳಲು ಅವಕಾಶ ಕಲ್ಪಿಸಲಾಗಿತ್ತು. ತಮ್ಮ ಮಕ್ಕಳು ಬೇಗನೆ ಮನೆಗೆ ಬರುತ್ತಿರುವುದು ಹಾಗೂ ಅಪಘಾತ ಸಂಭವಿಸಿರುವುದು ಗೊತ್ತಿರಲಿಲ್ಲ.

 ಶಾಲೆ ಆಡಳಿತ ಮಂಡಳಿ ಮಾಹಿತಿ ನೀಡಿದಾಗಲೇ ಗೊತ್ತಾಯಿತು ಎಂದು ಗಾಯಗೊಂಡ ವಿದ್ಯಾರ್ಥಿಯ ಪಾಲಕರು ತಿಳಿಸಿದರು. ಬಸ್‍ನಲ್ಲಿ ಪುಟ್ಟ ಮಕ್ಕಳಿರುತ್ತಾರೆ ಎನ್ನುವುದರ ಅರಿವು ಬಸ್ ಚಾಲಕನಿಗೆ ಇರಬೇಕು. ಎಚ್ಚರಿಕೆಯಿಂದ ಚಲಾಯಿಸಬೇಕಿತ್ತು. ಆದರೆ, ಶಾಲಾ ಬಸ್ಸಿನ ಚಾಲಕನ ನಿರ್ಲಕ್ಷ್ಯತನದಿಂದ ದುರಂತಕ್ಕೆ ಕಾರಣವಾಗಿದೆ ಎಂದು ಮತ್ತೊಬ್ಬ ಪಾಲಕ ತಿಳಿಸಿದರು. ಪ್ರಕರಣ ಸಂಬಂಧ ನಿರ್ಲಕ್ಷ್ಯತನ ಚಾಲನೆ ಆರೋಪದ ಮೇಲೆ ಬಸ್ ಚಾಲಕ ವಿಜೇಂದ್ರನನ್ನು ಯಲಹಂಕ ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com