ಬಿಎಂಟಿಸಿ ಬಸ್ಸಿನಲ್ಲಿ ಹಠಾತ್ ಬೆಂಕಿ

ಚಲಿಸುತ್ತಿದ್ದ ಬಿಎಂಟಿಸಿ ಬಸ್‍ನ ಎಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡು ದುರಂತವೊಂದು ಸ್ವಲ್ಪದರಲ್ಲೇ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಚಲಿಸುತ್ತಿದ್ದ ಬಿಎಂಟಿಸಿ ಬಸ್‍ನ ಎಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡು ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದ್ದು ಬಸ್ಸಿನಲ್ಲಿದ್ದ 20 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೆಂಪೇಗೌಡ ಬಸ್ ನಿಲ್ದಾಣದಿಂದ ಪೀಣ್ಯಕ್ಕೆ ತೆರಳುತ್ತಿದ್ದ ಬಿಎಂಟಿಸಿ ಬಸ್‍ನಲ್ಲಿ ಲಗ್ಗೆರೆ ಮೇಲ್ಸೇತುವೆ ರಿಂಗ್ ರಸ್ತೆ ಬಳಿ ಬೆಂಕಿ ಕಾಣಿಸಿಕೊಂಡಿದೆ. ಎಂಜಿನ್‍ನಿಂದ ಸೀಟಿನ ಬಳಿ ಹೊಗೆ ಬರುತ್ತಿರುವುದನ್ನು ಗಮನಿಸಿದ ಚಾಲಕ ಮಹೇಂದ್ರ, ಕೂಡಲೇ ರಸ್ತೆ ಬದಿ ಬಸ್ ನಿಲ್ಲಿಸಿ ಬಸ್‍ನ ಎಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ ಬೇಗ ಕೆಳಗಿಳಿಯಿರಿ ಎಂದು ಕೂಗಾಡಿದ್ದಾನೆ. ಬಸ್ ನಿಲ್ಲಿಸಿದ ಕೆಲವೇ ಸೆಕೆಂಡುಗಳಲ್ಲಿ ಎಲ್ಲ ಪ್ರಯಾಣಿಕರು ಬಸ್‍ನಿಂದ ಕೆಳಗಿಳಿದು ದೂರ ಓಡಿದ್ದಾರೆ.

ಚಾಲಕನೇ ಅಗ್ನಿ ಶಾಮಕ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾನೆ. ಮೊದಲು ಪೀಣ್ಯ ಅಗ್ನಿಶಾಮಕ ಠಾಣೆಯಿಂದ ಒಂದು ವಾಹನ ಕಳುಹಿಸಲಾಗಿತ್ತು. ನಂತರ ಯಶವಂತಪುರ ಠಾಣೆಯಿಂದಲೂ ಒಂದು ವಾಹನ ಕಳುಹಿಸಿಕೊಡಲಾಯಿತು. ಅಷ್ಟರಲ್ಲೇ ಬೆಂಕಿ ವ್ಯಾಪಿಸಿಕೊಂಡು ಹೊತ್ತಿ ಉರಿಯಲು ಆರಂಭಿಸಿತ್ತು ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿ ತಿಳಿಸಿದರು.

2014ರಲ್ಲಿ ಬೆಂಗಳೂರಿನ ವಿವಿಧೆಡೆ ಬಿಎಂಟಿಸಿ, ಖಾಸಗಿ ಹಾಗೂ ವೋಲ್ವೋ ಸೇರಿದಂತೆ ಒಟ್ಟು 17 ಬಸ್‍ಗಳು ಅಗ್ನಿಗಾಹುತಿಯಾಗಿವೆ. 2015ರ ಜನವರಿ ತಿಂಗಳೊಂದರಲ್ಲೇ 3 ಬಿಎಂಟಿಸಿ ಬಸ್‍ಗಳು ಬೆಂಕಿಗೆ ಆಹುತಿಯಾಗಿವೆ. ಬ್ಯಾಟರಿ, ಎಂಜಿನ್ ಸೇರಿದಂತೆ ಬಸ್‍ನ ಪ್ರಮುಖ ಭಾಗಗಳ ಸೂಕ್ತ ನಿರ್ವಹಣೆ ಇಲ್ಲದೇ ಇರುವುದೇ ಈ ರೀತಿಯ ದುರಂತಕ್ಕೆ ಕಾರಣವಾಗುತ್ತವೆ ಎಂದು ಅಗ್ನಿಶಾಮಕ ಇಲಾಖೆ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com