
ನವದೆಹಲಿ: ಬಿಜೆಪಿ ವಿರುದ್ಧ ತೀವ್ರ ದಾಳಿ ಮಾಡುತ್ತಿದ್ದ ಆಮ್‌ಆದ್ಮಿಪಕ್ಷದ ವಿರುದ್ಧ ಪ್ರತಿ ದಾಳಿಗೆ ಮುಂದಾಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಆಮ್‌ಆದ್ಮಿ ಬೆನ್ನಿಗೆ ಚೂರಿ ಹಾಕುವ ಪಕ್ಷ ಎಂದು ಹೇಳಿದ್ದಾರೆ.
ದೆಹಲಿ ವಿಧಾನಸಭಾ ರ್ಯಾಲಿಯೊಂದರಲ್ಲಿ ಪಾಲ್ಗೊಂಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಮ್‌ಆದ್ಮಿಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್‌ಗೆ ಮತ ಹಾಕಿ ಮೊದಲೇ ತಪ್ಪು ಮಾಡಿದ್ದೀರಿ, ಈಗ ಮತ್ತೊಮ್ಮೆ ಅವಕಾಶ ಸಿಕ್ಕಿದ್ದು ಮೊದಲು ಮಾಡಿದ ತಪ್ಪನ್ನೇ ಪುನಾರಾವರ್ತಿಸಬೇಡಿ ಎಂದು ಹೇಳಿದ್ದಾರೆ.
ಇದೇ ವೇಳೆ ವಿರೋಧ ಪಕ್ಷಗಳ ಟೀಕೆಗಳಿಗೆ ಪಕ್ಷದ ಸಂಸದರ ವಿರುದ್ಧ ಕಿಡಿಕಾರಿರುವ ಮೋದಿ ಅವರು, ಗಣರಾಜ್ಯೋತ್ಸವಕ್ಕೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಬಂದು ಹೋದ ನಂತರ ಪಕ್ಷದಲ್ಲಿ ಉತ್ತಮ ಬೆಳವಣಿಗೆಗಳು ಕಂಡು ಬಂದಿಲ್ಲ. ಇದನ್ನೇ ವಿರೋಧ ಪಕ್ಷಗಳು ಅಸ್ತ್ರವನ್ನಾಗಿರಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಯಲ್ಲಿ ಪರಿಣಾಮ ಬೀರಲು ಕಾದು ನಿಂತಿವೆ ಎಂದಿದ್ದಾರೆ.
2013ರಲ್ಲಿ ಅತಿ ಕಡಿಮೆ ಮತಗಳನ್ನು ಬಿಜೆಪಿ ಪಡೆದಿದ್ದು, ಈ ಬಾರಿ ಪಕ್ಷ ಸ್ಥಿರ, ಭ್ರಷ್ಟಾಚಾರ ಮುಕ್ತ ಹಾಗೂ ಪ್ರಾಮಾಣಿಕ ಸರ್ಕಾರವನ್ನು ನೀಡಲಿದ್ದು, ಈ ಹಿಂದಿದ್ದಂತಹ ಸರ್ಕಾರವಾಗುವುದಿಲ್ಲ. ಆಮ್‌ಆದ್ಮಿಪಕ್ಷವನ್ನು ನಂಬಿ ಜನರು ಮತ ಹಾಕಿದ್ದರು. ಆದರೆ ಆಮ್‌ಆದ್ಮಿ ನಂಬಿಕೆ ಉಳಿಸಿಕೊಳ್ಳದೇ, ಜನರ ನಂಬಿಕೆ ಮೋಸ ಮಾಡಿ ಬೆನ್ನಿಗೆ ಚೂರಿ ಹಾಕಿತ್ತಲ್ಲದೇ ಜನರ ಆಕಾಂಕ್ಷೆ, ಕನಸನ್ನು ಹಾಳಾಗುವಂತೆ ಮಾಡಿತು. ಆದ್ದರಿಂದ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಆಮ್‌ಆದ್ಮಿ ಪಕ್ಷಕ್ಕೆ ಬುದ್ಧಿಕಲಿಸಲು ಜನರಿಗೆ ಒಂದು ಅವಕಾಶ ಸಿಕ್ಕಿದ್ದು, ಹಿಂದೆ ಮಾಡಿದ ತಪ್ಪನ್ನು ಮಾಡದಂತೆ ಮತದಾರರಿಗೆ ತಿಳಿಸಿದ್ದಾರೆ.
ಇದೇ ವೇಳೆ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ರಾಜಕೀಯ ಪ್ರವೇಶಿಸಿರುವ ಕಿರಣ್ ಬೇಡಿ ಕುರಿತು ಮಾತನಾಡಿರುವ ಮೋದಿ, ಭಾರತದ ಗುರ್ತಿಸಿಕೊಳ್ಳಲು ದೆಹಲಿಗಿಂತ ದೊಡ್ಡ ರಾಜ್ಯ ಇನ್ನೆಲ್ಲೂ ಇಲ್ಲ, ಕಿರಣ್‌ಬೇಡಿಗೆ ಆಡಳಿತವನ್ನು ನಡೆಸುವ ಉತ್ತಮ ಶಕ್ತಿ ಇದ್ದು, ದೆಹಲಿಯ ಇತಿಹಾಸ, ಇಲ್ಲಿನ ಸಮಸ್ಯೆ ಕುರಿತು ಸಂಪೂರ್ಣ ಅರಿವು ಅವರಲ್ಲಿದೆ. ಒಂದು ವೇಳೆ ದೆಹಲಿ ಮುಖ್ಯಮಂತ್ರಿಯಾಗಿ ಅವರು ಗೆಲುವು ಸಾಧಿಸಿದ್ದಲ್ಲಿ, ದೆಹಲಿಯನ್ನು ಬಹು ಎತ್ತರಕ್ಕೆ ತೆಗೆದುಕೊಂಡು ಹೋಗುವ ಶಕ್ತಿ ಕಿರಣ್‌ಬೇಡಿಗಿದೆ ಎಂದು ಹೇಳಿದ್ದಾರೆ.
Advertisement