ನಾಸಿಕ್: ಕುಂಭಮೇಳದಲ್ಲಿ ಕಾಂಡೋಮ್ ಏಕೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಆದರೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ಜುಲೈ 14ರಿಂದ ಆರಂಭವಾಗುವ ಈ ಕುಂಭಮೇಳದಲ್ಲಿ ಸರಿಸುಮಾರು 1 ಕೋಟಿ ಮಂದಿ ಭಾಗವಹಿಸುತ್ತಾರೆ. ಇದಕ್ಕೆ ಭಾರತೀಯರಷ್ಟೇ ಅಲ್ಲ, ವಿದೇಶೀಯರು ಬಂದು ಸೇರುತ್ತಾರೆ. ಇವರೆಲ್ಲರಿಗಿಂತ ಹೆಚ್ಚಾಗಿ, 1 ಲಕ್ಷಕ್ಕೂ ಹೆಚ್ಚು ಲೈಂಗಿಕ ಕಾರ್ಯಕರ್ತರು ಬರುತ್ತಾರಂತೆ. ಹೀಗಾಗಿ ಮಹಾರಾಷ್ಟ್ರ ಏಡ್ಸ್ ನಿಯಂತ್ರಣ ಸಂಸ್ಥೆ ಎಲ್ಲಿಂದ ಕಾಂಡೋಮ್ ತರೋದು ಎಂಬ ಸಂದಿಗ್ಧತೆಯಲ್ಲಿ ಸಿಲುಕಿದೆ ಎಂದು ರಾಷ್ಟ್ರೀಯ ದೈನಿಕವೊಂದು ವರದಿ ಮಾಡಿದೆ.
ನಾಸಿಕ್ ನಲ್ಲಿನ ಆಸ್ರತ್ರೆಗಳಲ್ಲಿ ಕಾಂಡೋಮ್ ಗಳು ಖಾಲಿಯಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿನ ಆಸ್ಪತ್ರೆಗಳಿಂದ ತರಿಸಿಕೊಳ್ಳಲಾಗುತ್ತಿದೆ ಎಂದು ಎಂಎಸ್ಎಸಿ ಜಿಲ್ಲಾ ಯೋಜನಾಧಿಕಾರಿ ಯೋಗೀಶ್ ಪರದೇಶಿ ಹೇಳಿದ್ದಾರೆ.
ಇರುವುದೇ 50 ಸಾವಿರ ಕಾಂಡೋಮ್: ಜಿಲ್ಲೆಯಲ್ಲಿ ಸದ್ಯ 50 ಸಾವಿರ ಕಾಂಡೋಮ್ ಗಳ ದಾಸ್ತಾನಿದೆ. ಇದು ಕುಂಭಮೇಳ ಆರಂಭವಾಗುವುದಕ್ಕೆ ಮೊದಲೇ ಖಾಲಿಯಾಗಲಿದೆ ಎಂದು ಎಂಎಸ್ಎಸಿಯ ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಘಟನೆ(ನಾಕೊ) ಕಾಂಡೋಮ್ ಗಳ ಸರಬರಾಜು ಸ್ಥಗಿತಗೊಳಿಸಿದ್ದು ದಾಸ್ತಾನು ಮುಗಿದಿದೆ ಎಂದಿದ್ದಾರೆ.
ನಾಸಿಕ್ ನಗರದಲ್ಲಿ 2 ಸಾವಿರ ಲೈಂಗಿಕ ಕಾರ್ಯಕರ್ತರಿದ್ದು, ಕುಂಭ ಮೇಳಕ್ಕೆ ಬೇರೆಡೆಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಆಗಮಿಸುವ ಅಂದಾಜಿವೆ. ನಾಸಿಕ್ ಜಿಲ್ಲೆಗೆ ಮಾತ್ರವೇ ತಿಂಗಳಿಗೆ ಕನಿಷ್ಠ 2 ಲಕ್ಷ ಕಾಂಡೋಮ್ ಗಳ ಅಗತ್ಯವಿದೆ. ಈ ಲೆಕ್ಕದಲ್ಲಿ ವಾರ್ಷಿಕ 24 ಲಕ್ಷ ಕಾಂಡೋಮ್ ಗಳು ಬೇಕಾಗಲಿವೆ ಎಂದು ಅಂದಾಜಿಸಲಾಗಿದೆ. ಇಷ್ಟೇ ಸಂಖ್ಯೆಯ ಕಾಂಡೋಮ್ ಗಳು ಮೇಳಕ್ಕೆ ಅಗತ್ಯವಿದೆ.
ಆದರೆ ನಾಕೊ ಎಂಎಸ್ಎಸಿ ಮತ್ತು ಎನ್ ಜಿಒಗಳಿಗೆ ನೀಡುವ ನೆರವನ್ನು ಕಡಿತಗೊಳಿಸಿದೆ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಕುಂಭ ಮೇಳಗಳಂತಹ ಸಂದರ್ಭದಲ್ಲಿ ಎಚ್ ಐವಿ ಮತ್ತು ಏಡ್ಸ್ ಸೋಂಕು ಹರಡದಂತೆ ತಡೆಯಲು ದುಪ್ಪಟ್ಟು ಕಾಂಡೋಮ್ ಗಳ ಅಗತ್ಯವಿದೆ ಎಂದು ಪ್ರವರ ಮೆಡಿಕಲ್ ಇನ್ಸ್ ಟ್ಯೂಟ್ ಯೋಜನಾಧಿಕಾರಿ ಕುಲದೀಪ್ ಪವಾರ್ ಹೇಳಿದ್ದಾರೆ. ಸರ್ಕಾರದಿಂದ ಉಚಿತವಾಗಿ ಸರಬರಾಜು ಮಾಡಲು ದಾಸ್ತಾನು ಇಲ್ಲದಿದ್ದರೆ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಎಂದಿದ್ದಾರೆ.
ಲೈಂಗಿಕ ಕಾರ್ಯಕರ್ತರಿಗೆ ಹೋಲಿಸಿದರೆ ಸಾಮಾನ್ಯ ಜನರಲ್ಲಿ ಎಚ್ ಐವಿ ಸೋಂಕು ಪ್ರಮಾಣ ಹೆಚ್ಚಾಗಿದೆ. ಹೀಗಿರುವಾಗ ಸುರಕ್ಷತೆ ಇಲ್ಲದಿದ್ದರೆ ಲೈಂಗಿಕ ಕಾರ್ಯಕರ್ತರಿಗೂ ಸೋಂಕು ಹಬ್ಬಲಿದೆ ಎಂದಿದ್ದಾರೆ. ಕಳೆದ ಮೂರು ತಿಂಗಳ ಹಿಂದೆಯೇ ಸರ್ಕಾರ ಕಾಂಡೋಮ್ ಸರಬರಾಜು ಸ್ಥಗಿತಗೊಳಿಸಿದೆ.ಈಗಿರುವ ದಾಸ್ತಾನು ವಾರಕ್ಕೆ ಮುಗಿಯಲಿದೆ. ಹೀಗಾಗಿ ಸರ್ಕಾರ ಹೆಚ್ಚಿನ ನೆರವು ನೀಡಬೇಕೆಂದು ಕೇಳಿದ್ದಾರೆ. ಒಂದು ವೇಳೆ ಲೈಂಗಿಕ ಕಾರ್ಯಕರ್ತರಿಗೆ ಕಾಂಡೋಮ್ ಸಿಗದಿದ್ದಲ್ಲಿ ಎಚ್ ಐವಿ ತಡೆಯಲು ದಶಕದಿಂದ ಮಾಡಿರುವ ಎಲ್ಲ ಪ್ರಯತ್ನಗಳು ವ್ಯರ್ಥವಾಗಲಿದೆ ಎಂದು ಎಚ್ಚರಿಸಿದ್ದಾರೆ.
Advertisement