
ನವದೆಹಲಿ: ವ್ಯಾಪಂ ಕುರಿತು ವರದಿ ಮಾಡುತ್ತಿದ್ದ ಪತ್ರಕರ್ತರೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಬೆನ್ನಲ್ಲೇ ಹಗರಣದಲ್ಲಿ ಶಾಮೀಲಾಗಿದ್ದರೆನ್ನಲಾದ ಜಬಲ್ ಪುರ್ ಮೆಡಿಕಲ್ ಕಾಲೇಜ್ ನ ಡೀನ್ ಅನುಮಾನಸ್ಪದವಾಗಿ ಮೃತಪಟ್ಟಿದಾರೆ.
ಜಬಲ್ ಪುರದಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಮೆಡಿಕಲ್ ಕಾಲೇಜಿನ ಡೀನ್ ಡಾ. ಅರುಣ್ ಶರ್ಮಾ ಅವರ ಮೃತ ದೇಹ ನವದೆಹಲಿಯ ಹೊಟೆಲ್ ಒಂದರಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಶರ್ಮಾ ಮೃತದೇಹದ ಪಕ್ಕದಲ್ಲೇ ಮದ್ಯದ ಬಾಟಲಿಗಳು ಕಂಡುಬಂದಿದ್ದು, ಅತಿ ಹೆಚ್ಚು ಮದ್ಯ ಸೇವನೆ ಮಾಡಿರುವ ಲಕ್ಷಣಗಳಿವೆ ಎಂದು ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ. ಫಾರೆನ್ಸಿಕ್ ಸಾಕ್ಷ್ಯಗಳನ್ನು ಕಲೆಹಾಕಿರುವ ಪೊಲೀಸರು ಶರ್ಮಾ ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ.
ನಿಗೂಢವಾಗಿ ಸಾವನ್ನಪ್ಪಿರುವ ಡಾ. ಅರುಣ್ ಶರ್ಮಾ ಅವರಿಗೂ ಮಧ್ಯಪ್ರದೇಶದಲ್ಲಿ ನಡೆದಿರುವ ವ್ಯಾಪಂ ಹಗರಣಕ್ಕೂ ಸಂಬಂಧವಿತ್ತು ಎಂಬ ಆರೋಪ ಕೇಳಿಬಂದಿದೆ. ಈ ದೃಷ್ಟಿಯಿಂದಲೂ ಶರ್ಮಾ ನಿಗೂಢ ಸಾವಿನ ಪ್ರಕರಣವನ್ನು ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ. ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತನೂ ಸೇರಿ ಈ ವರೆಗೂ ಸುಮಾರು 25 ಆರೋಪಿಗಳು ಹಾಗೂ ಸಾಕ್ಷಿಗಳು ಸಾವನ್ನಪ್ಪಿದ್ದಾರೆ.
Advertisement