
ನವದೆಹಲಿ: ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಬೆಂಬಲಕ್ಕೆ ನಿಂತಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ಮಧ್ಯಪ್ರದೇಶ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮಾತ್ರ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಬಹುದು ಎಂದು ಸೋಮವಾರ ಹೇಳಿದ್ದಾರೆ.
'ವ್ಯಾಪಂಗೆ ಸಂಬಂಧಿಸಿದ ಎಲ್ಲ ಪ್ರಕರಣಗಳು ರಾಜ್ಯ ಸರ್ಕಾರದ ಅಡಿ ಬರುವುದಿಲ್ಲ. ಹೀಗಾಗಿ ಹಗರಣವನ್ನು ಸಿಬಿಐಗೆ ವಹಿಸುವ ಬಗ್ಗೆ ಹೈಕೋರ್ಟ್ ನಿರ್ಧಾರ ತೆಗೆದುಕೊಳ್ಳಬೇಕು. ಆದರೆ ಪ್ರತಿಪಕ್ಷಗಳು ಪ್ರಕರಣದಲ್ಲಿ ಅನಗತ್ಯ ರಾಜಿಕೀಯ ಮಾಡುತ್ತಿವೆ' ಎಂದು ಆರೋಪಿಸಿದ್ದಾರೆ.
ವ್ಯಾಪಂ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದ್ದ ಮಧ್ಯಪ್ರದೇಶ ರಾಜ್ಯಪಾಲ ರಾಮ್ ನರೇಶ್ ಯಾದವ್ ಅವರನ್ನು ವಜಾಗೊಳಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸದ ನಂತರ ಚೌಹಾಣ್ ಹಗರಣವನ್ನು ಸಿಬಿಐಗೆ ವಹಿಸಬೇಕು ಎಂಬ ಒತ್ತಡ ಹೆಚ್ಚುತ್ತಿದ್ದು, ಇದೀಗ ಕೇಂದ್ರ ಅವರ ಬೆಂಬಲಕ್ಕೆ ನಿಂತಿದೆ.
ಪ್ರಕರಣ ಸಂಬಂಧ 47 ಜನ ನಿಗೂಢವಾಗಿ ಸಾವನ್ನಪ್ಪಿದ್ದರೂ ಮುಖ್ಯಮಂತ್ರಿಗಳು ಪ್ರಕರಣವನ್ನು ಸಿಬಿಐಗೆ ವಹಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
ಈ ಮಧ್ಯೆ, ವಿಶೇಷ ತನಿಖಾ ತಂಡ(ಎಸ್‌ಐಟಿ) ಪ್ರಕರಣದ ತನಿಖೆ ನಡೆಸುತ್ತಿದೆ. ಅಲ್ಲದೆ ಹಗರಣವನ್ನು ಸಿಬಿಐ ತನಿಖೆಗೆ ವಹಿಸಲು ಹೈಕೋರ್ಟ್ ನಿರಾಕರಿಸಿದೆ. ಹೀಗಿರುವಾಗ ನಾನು ಸಿಬಿಐಗೆ ವಹಿಸಲು ಹೇಗೆ ಸಾಧ್ಯ ಎಂದು ಚೌಹಾಣ್ ಪ್ರಶ್ನಿಸಿದ್ದಾರೆ.
Advertisement