
ನವದೆಹಲಿ: ವ್ಯಾಪಂ ಹಗರಣದ ಭಾಗಿ ಎನ್ನಲಾಗುತ್ತಿರುವ ಮಧ್ಯಪ್ರದೇಶದ ರಾಜ್ಯಪಾಲ ರಾಮ್ ನರೇಶ್ ಯಾದವ್ ಅವರ ವಜಾ ಕೋರಿ ಗೃಹ ಸಚಿವ ರಾಜನಾಥ ಸಿಂಗ್ ಅವರು ಗುರುವಾರ ರಾಷ್ಟ್ರಪತಿ ಅವರನ್ನು ಭೇಟಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಭೇಟಿ ಪೂರ್ವ ನಿಗದಿತ ಭೇಟಿ ಎಂದು ಹೇಳಲಾಗುತ್ತಿದೆ. ಗೃಹ ಸಚಿವರು ಇಂದು ಸಂಜೆ ರಾಷ್ಟ್ರಪತಿ ಅವರನ್ನು ಭೇಟಿ ಮಾಡಲಿದ್ದು, ರಾಷ್ಟ್ರಪತಿ ಭೇಟಿ ವೇಳೆ ರಾಜನಾಥ್ ಸಿಂಗ್ ಅವರು ಮಧ್ಯಪ್ರದೇಶ ರಾಜ್ಯಪಾಲ ರಾಮ್ ನರೇಶ್ ಯಾದವ್ ಅವರ ವಜಾ ಕುರಿತಂತೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಮಧ್ಯಪ್ರದೇಶದ ವ್ಯಾಪಂ ಹಗರಣ ದೇಶದಾದ್ಯಂತ ತೀವ್ರ ಸಂಚಲನ ಮೂಡಿಸಿದ್ದು. ಹಗರಣಕ್ಕೆ ಸಂಬಂಧಿಸಿದಂತೆ ಕಳೆದ 2 ವರ್ಷದಲ್ಲಿ ಇದುವರೆಗೆ 48 ಸಾಕ್ಷಿಗಳು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿಗಳು ದಾಖಲಾಗಿತ್ತು. ಹೀಗಾಗಿ ಪ್ರಕರಣ ಸಂಬಂಧ ಎಲ್ಲಾ ವಿಚಾರಣೆಯನ್ನು ಜುಲೈ 9 ರಂದು ನಡೆಸುವುದಾಗಿ ಸುಪ್ರೀಂಕೋರ್ಟ್ ಹೇಳಿತ್ತು.
ಇದರಂತೆ ಇಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಎಲ್.ದತ್ತು ನೇತೃತ್ವದ ವಿಭಾಗೀಯ ಪೀಠ ಪ್ರಕರಣದ ಸಂಬಂಧ ಎಲ್ಲಾ ತನಿಖೆಯನ್ನು ಸಿಬಿಐ ವಶಕ್ಕೆ ನೀಡಿತ್ತಲ್ಲದೆ, ರಾಜ್ಯಪಾಲ ರಾಮ್ ನರೇಶ್ ಯಾದವ್ ಅವರನ್ನು ವಜಾಗೊಳಿಸುವಂತೆ ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೂ ನೋಟಿಸ್ ಜಾರಿ ಮಾಡಿತ್ತು.
Advertisement