
ನವದೆಹಲಿ: ದ್ವಿಪಕ್ಷೀಯ ಮಾತುಕತೆಯಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್ ಎಲ್ಲಾ ಸ್ವರೂಪಗಳ ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸುವುದಾಗಿ ಭರವಸೆ ನೀಡಿರುವುದನ್ನು ಭಾರತದ ಗೆಲುವು ಎಂದು ಬಿಜೆಪಿ ಹೇಳಿದೆ.
ಎಸ್.ಸಿ.ಒ ಶೃಂಗಸಭೆಯ ಸಂದರ್ಭದಲ್ಲಿ ಮೋದಿ- ನವಾಜ್ ಷರೀಫ್ ಮಾತುಕತೆ ನಂತರ ಮಾತನಾಡಿದ ಬಿಜೆಪಿ ರಾಜ್ಯಸಭಾ ಸದಸ್ಯ ಎಂ.ಜೆ ಅಕ್ಬರ್, ಭಾರತ ಹಲವು ದಶಕಗಳಿಂದ ಹೇಳುತ್ತಿದ್ದ ಭಯೋತ್ಪಾದನೆ ವ್ಯಾಖ್ಯಾನವನ್ನು ಪಾಕಿಸ್ತಾನ ಮೊದಲ ಬಾರಿಗೆ ಒಪ್ಪಿಕೊಂಡಿದೆ ಇದು ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ವೃದ್ಧಿಯಲ್ಲಿ ಮಹತ್ವದ ತಿರುವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ತನ್ನ ನೆಲದಲ್ಲಿ ಭಯೋತ್ಪಾದನೆಯ ಅಸ್ತಿತ್ವವನ್ನೇ ನಿರಾಕರಿಸುತ್ತಿದ್ದ ಪಾಕಿಸ್ತಾನ ಈಗ ತನ್ನ ಎಲ್ಲಾ ಸ್ವರೂಪದ ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸಲು ಒಪ್ಪಿಗೆ ಸೂಚಿಸಿದೆ, ಇದಕ್ಕೂ ಮುನ್ನ ಪಾಕಿಸ್ತಾನ ಭಯೋತ್ಪಾದನೆಯನ್ನು ಒಳ್ಳೆಯ ಭಯೋತ್ಪಾದನೆ, ಕೆಟ್ಟ ಭಯೋತ್ಪಾದನೆ ಎಂದು ವಿಭಾಗಿಸಿತ್ತು ಎಂದು ಎಂ.ಜೆ ಅಕ್ಬರ್ ಹೇಳಿದ್ದಾರೆ.
26 / 11 ರ ದಾಳಿಗೆ ಸಂಬಂಧಿಸಿದಂತೆ ತನಿಖೆಯನ್ನು ಚುರುಕುಗೊಳಿಸುವುದಾಗಿ ಹೇಳಿರುವ ಪಾಕಿಸ್ತಾನ, ನಮಗೆ ಆಧಾರವಾಗಿದ್ದ ಉಗ್ರಗಾಮಿಗಳ ಧ್ವನಿ ಮಾದರಿಗಳನ್ನು ಒಪ್ಪಿಕೊಂಡಿದೆ ಎಂದು ಎಂ.ಜೆ ಅಕ್ಬರ್ ತಿಳಿಸಿದ್ದಾರೆ.
Advertisement