ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ದಂತ, ವೈದ್ಯ ಪರೀಕ್ಷೆಯಲ್ಲಿ ನ್ಯಾಯಾಧೀಶರೇ ಭಾಗಿ?

ಮಧ್ಯಪ್ರದೇಶದ ಪರೀಕ್ಷೆ ಮಂಡಳಿ(ವ್ಯಾಪಂ)ಯು ಜು.12ರಂದು ನಡೆಯಬೇಕಿದ್ದ ಖಾಸಗಿ ವೈದ್ಯ,ದಂತವೈದ್ಯ ಕಾಲೇಜುಗಳ ಪ್ರವೇಶ ಪರೀಕ್ಷೆಯನ್ನು...

ಭೋಪಾಲ್: ಮಧ್ಯಪ್ರದೇಶದ ಪರೀಕ್ಷೆ ಮಂಡಳಿ(ವ್ಯಾಪಂ)ಯು ಜು.12ರಂದು ನಡೆಯಬೇಕಿದ್ದ ಖಾಸಗಿ ವೈದ್ಯ,ದಂತವೈದ್ಯ ಕಾಲೇಜುಗಳ ಪ್ರವೇಶ ಪರೀಕ್ಷೆಯನ್ನು ಮುಂದೂಡಿದೆ. ಮಾಹಿತಿದಾರರೊಬ್ಬರು ಹಗರಣದಲ್ಲಿ ಭಾಗಿಯಾಗಿರುವ ನ್ಯಾಯಾ ಧೀಶರ ಹೆಸರನ್ನೂ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಖಾಸಗಿ ದಂತ ವೈದ್ಯ ಮತ್ತು ವೈದ್ಯಕೀಯ ಕಾಲೇಜುಗಳ ಒಕ್ಕೂಟ (ಎಪಿಡಿ ಎಂಸಿ)ಕ್ಕೆ ಒಎಂಆರ್ ಉತ್ತರ ಪತ್ರಿಕೆಯನ್ನುಸ್ಕ್ಯಾನ್ ಮಾಡುವಂತೆ ಮಧ್ಯಪ್ರದೇಶ ಹೈಕೋರ್ಟ್ ಗುರುವಾರವಷ್ಟೇ ಪರೀಕ್ಷಾ ಮಂಡಳಿಗೆ ಸೂಚಿಸಿತ್ತು. ಡಿಮ್ಯಾಟ್ ಪರೀಕ್ಷೆಯನ್ನು ಮಧ್ಯಪ್ರದೇಶದ 9 ಕೇಂದ್ರಗಳು ಮಾತ್ರವಲ್ಲದೆ ದೇಶದ ವಿವಿಧೆಡೆ ಇರುವ ಪರೀಕ್ಷೆ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಮಾಹಿತಿದಾರ ಡಾ. ಆನಂದ್ ರಾಯ್ ಅವರು ಈ ಪರೀಕ್ಷೆಯಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಮನವಿ ಮಾಡಿದ್ದಾರೆ. ಇದೊಂದು ಪ್ರಮುಖ ಹಗರಣವಾಗಿದೆ. ಶೇ.43ರಷ್ಟು ಖಾಸಗಿ ಕಾಲೇಜು ಕೋಟಾ ಹಾಗೂ ಶೇ.15ರಷ್ಟು ಎನ್‍ಆರ್‍ಐ ಕೋಟಾ ಸೀಟುಗಳು ಭಾರಿ ಹಣಕ್ಕೆ ಮಾರಾಟ ಮಾಡಲಾಗುತ್ತದೆ ಎಂದು ಅವರು ಆರೋಪಿಸಿದ್ದರು. ಜತೆಗೆ, ನ್ಯಾಯಾಧೀಶರಲ್ಲೂ ಈ ಹಗರಣದ ಫಲಾನುಭವಿಗಳಿದ್ದಾರೆ. ಅವರ ಹೆಸರನ್ನೂ ಸುಪ್ರೀಂ ಕೋರ್ಟ್ ಮುಂದೆ ಇಡುವುದಾಗಿ ಹೇಳಿದ್ದರು. ಆದರೆ, ಪರೀಕ್ಷೆಯನ್ನು ಮುಂದೂಡಿದ್ದಕ್ಕೆ ಎಪಿಡಿಎಂಸಿ ಮುಖ್ಯಸ್ಥ ಡಾ. ವಿ.ಕೆ. ಮಹಾದಿಕ್ ಅವರು ತಾಂತ್ರಿಕ ಕಾರಣವನ್ನು ಮುಂದಿಟ್ಟಿದ್ದಾರೆ. ಎಲ್ಲ ಉತ್ತರಪತ್ರಿಕೆಯನ್ನು ಸ್ಕ್ಯಾನ್ ಮಾಡಬೇಕಿರುವ ಹಿನ್ನೆಲೆಯಲ್ಲಿ ಪೂರ್ವಸಿದ್ಧತೆಗಾಗಿ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಹೇಳಿದ್ದಾರೆ. ಎಪಿಡಿಎಂಸಿಯು ಖಾಸಗಿ ವೈದ್ಯ ದಂತ ವೈದ್ಯ ಮತ್ತು ವೈದ್ಯ ಕಾಲೇಜುಗಳಿಗೆ ಪ್ರವೇಶ ನೀಡಲು ಡಿಮ್ಯಾಟ್ ಪರೀಕ್ಷೆ ನಡೆಸುತ್ತದೆ. ವ್ಯಾಪಂ ಹಗರಣದ ತನಿಖೆ ಯನ್ನು ಸುಪ್ರೀಂ ಕೋರ್ಟ್ ಗುರುವಾರ ವಷ್ಟೇ ಸಿಬಿಐ ತನಿಖೆಗೆ ಹಸ್ತಾಂತರಿಸಿತ್ತು. ಬಹುಕೋಟಿ ಮೊತ್ತದ ಈ ಹಗರಣದಲ್ಲಿ ರಾಜಕಾರಣಿಗಳು, ಅಧಿಕಾರಿಗಳು, ಮಧ್ಯ ವರ್ತಿಗಳು ಸೇರಿ 2 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com