ಅತ್ಯಾಚಾರ ಆರೋಪ: ಗೃಹ ಸಚಿವಾಲಯ ಭೇಟಿಯಾಗಲಿರುವ ಅಮಿತಾಬ್ ಠಾಕೂರ್
ನವದೆಹಲಿ: ಐಪಿಎಸ್ ಅಧಿಕಾರಿ ಅಮಿತಾಬ್ ಠಾಕೂರ್ ಹಾಗೂ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಅವರ ನಡುವಿನ ಹಗ್ಗಜಗ್ಗಾಟ ತಾಕಕ್ಕೇರಿದ್ದು, ತಮ್ಮ ವಿರುದ್ಧ ಕೇಳಿಬಂದ ಅತ್ಯಾಚಾರ ಆರೋಪ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಐಪಿಎಸ್ ಅಧಿಕಾರಿ ಅಮಿತಾಬ್ ಠಾಕೂರ್ ಅವರು ಸೋಮವಾರ ಗೃಹ ಸಚಿವಾಲಯವನ್ನು ಭೇಟಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರ ವಿರುದ್ಧ ಉತ್ತರಪ್ರದೇಶದ ಐಪಿಎಸ್ ಅಧಿಕಾರಿ ಅಮಿತಾಬ್ ಠಾಕೂರ್ ಅವರು ಬೆದರಿಕೆ ದೂರು ದಾಖಲಿಸಿದ್ದರು. ದೂರಿನ ಬೆನ್ನಲ್ಲೇ ಐಪಿಎಸ್ ಅಧಿಕಾರಿ ವಿರುದ್ಧ ಘಜಿಯಾಬಾದ್ ನಲ್ಲಿ ಅತ್ಯಾಚಾರ ಪ್ರಕರಣವೊಂದು ದಾಖಲಾಗಿತ್ತು.
ತಮ್ಮ ವಿರುದ್ಧ ಕೇಳಿ ಬಂದ ಅತ್ಯಾಚಾರ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ್ದ ಐಪಿಎಸ್ ಅಧಿಕಾರಿ ಇದೊಂದು ಕೇವಲ ಕಾಲ್ಪನಿಕ ಕಥೆಯಾಗಿದ್ದು, ಮುಲಾಯಂ ಸಿಂಗ್ ವಿರುದ್ಧ ದೂರು ದಾಖಲಿಸಿದ್ದಕ್ಕೆ ಅತ್ಯಾಚಾರ ಪ್ರಕರಣ ದಾಖಲಿಸುವ ಮೂಲಕ ಸಮಾಜವಾದಿ ಪಕ್ಷ ನನಗೆ ಉಡುಗೊರೆ ನೀಡಿದೆ ಎಂದಿದ್ದರು. ಪ್ರಕರಣ ಸಂಬಂಧ ಉತ್ತರಪ್ರದೇಶದಾದ್ಯಂತ ಹಲವು ಚರ್ಚೆಗಳಾಗುತ್ತಿದ್ದು, ಇದೀಗ ಪ್ರಕರಣವನ್ನು ಸಿಬಿಐ ತನಿಖೆಗೊಪ್ಪಿಸುವಂತೆ ಕೋರಿ ಇಂದು ಅಮಿತಾಬ್ ಠಾಕೂರ್ ಅವರು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ ಐಪಿಎಸ್ ಅಧಿಕಾರಿ ಅಮಿತಾಬ್ ಠಾಕೂರ್ ಅವರ ಹೆಂಡತಿ ನೂತನ್ ಎಂಬುವವರು ಸಾಮಾಜಿಕ ಹೋರಾಟಗಾರ್ತಿಯಾಗಿದ್ದು, ಇವರು ಉತ್ತರಪ್ರದೇಶದ ಪ್ರದೇಶದ ಸಚಿವೆ ಗಾಯತ್ರಿ ಪ್ರಸಾದ್ ಪ್ರಜಾಪತಿ ಅಕ್ರಮ ಆಸ್ತಿ ಹೊಂದಿದ್ದಾರೆಂದು ಹೇಳಿ ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸುತ್ತಿದ್ದಂತೆ ಐಪಿಎಸ್ ಅಧಿಕಾರಿಯ ಮಡದಿಗೆ ಹಲವಾರು ಬಾರಿ ಬೆದರಿಕೆ ಕರೆ ಬಂದಿದೆ. ಆದರೆ, ಈ ಕರೆಯನ್ನು ಅವರು ನಿರ್ಲಕ್ಷಿಸಿದ್ದಾರೆ.
ದಿನಕಳೆದಂತೆ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಅವರು ಐಪಿಎಸ್ ಅಧಿಕಾರಿಗೆ ಕರೆ ಮಾಡಿ ಪ್ರಕರಣವನ್ನು ಹಿಂತೆಗೆದುಕೊಂಡು ತಾನು ಹೇಳಿದಂತೆ ಕೇಳಬೇಕು ಇಲ್ಲದೇ ಹೋದರೆ ಫಲಿತಾಂಶ ಬಹಳ ಕೆಟ್ಟದಾಗಿರುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಇದನ್ನು ಲೆಕ್ಕಿಸದ ಕಾರಣ ಮುಲಾಯಂ ಸಿಂಗ್ ಅವರ ಸಂಬಂಧಿ ಶ್ರೀ ರಾಮ್ ವೀರ್ ಸಿಂಗ್ ಎಂಬುವವರು ಐಪಿಎಸ್ ಅಧಿಕಾರಿಯ ಮೇಲೆ ಹಲವು ಬಾರಿ ದಾಳಿ ನಡೆಸಿದ್ದಾರೆ. ಅಧಿಕಾರಿಗಳ ಈ ವರ್ತನಗೆ ರೋಸಿಹೋದ ಐಪಿಎಸ್ ಅಧಿಕಾರಿ ಹಾಗೂ ಅವರ ಹೆಂಡತಿ ಮುಲಾಯಂ ಸಿಂಗ್ ವಿರುದ್ಧ ಬೆದರಿಕೆ ಆರೋಪ ವ್ಯಕ್ತಪಡಿಸಿ ಎಫ್ ಐಆರ್ ದಾಖಲಿಸಿದ್ದರು ಎಂದು ತಿಳಿದುಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ