
ನವದೆಹಲಿ: ವ್ಯಾಪಂ ಹಗರಣದ ತನಿಖೆಯನ್ನು ಸುಪ್ರೀಂಕೋರ್ಟ್ ಕಳೆದ ವಾರವಷ್ಟೇ ಸಿಬಿಐ ತನಿಖೆಗೆ ನೀಡಿದ್ದು, ಈ ಮಧ್ಯೆ ಕಾಂಗ್ರೆಸ್ ಕೇಂದ್ರ ಪೆಟ್ರೋಲಿಯಂ ಸಚಿವ ಧಮೇಂದ್ರ ಪ್ರಧಾನ್ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದು, ಈ ಸಂಬಂಧ ಕೂಡಲೇ ರಾಜಿನಾಮೆ ನೀಡಬೇಕು ಎಂದು ಆಗ್ರಸಿದೆ.
ಕಾಂಗ್ರೆಸ್ ನಾಯಕ ರಣ್ದೀಪ್ ಸಿಂಗ್ ಸುರ್ಜೇವಾಲ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು, ವ್ಯಾಪಂ ಹಗರಣದಲ್ಲಿ ಬಂದ ಹಣವನ್ನು ಬಿಜೆಪಿ ಮಂತ್ರಿಗಳು, ಲೋಕಸಭಾ ಸದಸ್ಯರು ಹಾಗೂ ರಾಷ್ಟ್ರೀಯ ಸ್ವಯಂಸೇವಾ ಸಂಘದ ನಾಯಕರು ಹಂಚಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
2011ರ ದಾಳಿ ವೇಳೆ ವ್ಯಾಪಂ ಹಗರಣದ ಕಿಂಗ್ ಪಿನ್ ಸುಧೀರ್ ಶರ್ಮಾ ಸೇರಿದಂತೆ ಇತರ ಬಳಿಯಿಂದ ವಶಪಡಿಸಿಕೊಂಡಿದ್ದ ದಾಖಲೆಗಳ ಆಧಾರದ ಮೇಲೆ ಆದಾಯ ತೆರಿಗೆ ಇಲಾಖೆ ಮಧ್ಯಂತರ ವರದಿಯನ್ನು ಸಿದ್ದಪಡಿಸಿದೆ. ಆ ಪ್ರಕಾರ ಸುಧೀರ್ ಶರ್ಮಾ ಮತ್ತು ಲಕ್ಷ್ಮಿಕಾಂತ್ ಶರ್ಮಾ ಅವರು ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ ರೊಂದಿಗೆ ಹಣವನ್ನು ಪಾಲು ಮಾಡಿಕೊಂಡಿದ್ದಾರೆ ಎಂದು ಸುರ್ಜೇವಾಲ ಆರೋಪಿಸಿದ್ದಾರೆ.
ಆದಾಯ ತೆರಿಗೆ ದಾಳಿ ವೇಳೆ ವಶಪಡಿಸಿಕೊಂಡಿರುವ ದಾಖಲೆಯಲ್ಲಿ ಧಮೇಂದ್ರ ಪ್ರಧಾನ್ ರ ವಿಮಾನ ಪ್ರಯಾಣದ ವೆಚ್ಚವನ್ನು ಸುಧೀರ್ ಶರ್ಮಾ ಭರಿಸಿರುವುದಾಗಿ ತಿಳಿದುಬಂದಿದೆ ಎಂದು ಸುರ್ಜೇವಾಲ ಹೇಳಿದ್ದಾರೆ.
Advertisement