ಪರಮಾಣು ಒಪ್ಪಂದ ರದ್ದು ಮಾಡಲು ಮುಂದಾಗಿದ್ದ ಸಿಂಗ್!

ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದ ಘೋಷಣೆಯಾಗುವ ಮುನ್ನಾ ದಿನ ಒಪ್ಪಂದವನ್ನು ರದ್ದು ಮಾಡುವ ದಿಟ್ಟ ನಿರ್ಧಾರಕ್ಕೆ ಅಂದಿನ...
ಮನಮೋಹನ್‍ಸಿಂಗ್
ಮನಮೋಹನ್‍ಸಿಂಗ್

ವಾಷಿಂಗ್ಟನ್: ``ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದ ಘೋಷಣೆಯಾಗುವ ಮುನ್ನಾ ದಿನ ಒಪ್ಪಂದವನ್ನು ರದ್ದು ಮಾಡುವ ದಿಟ್ಟ ನಿರ್ಧಾರಕ್ಕೆ ಅಂದಿನ ಪ್ರಧಾನಿ
ಮನಮೋಹನ್‍ಸಿಂಗ್ ಬಂದಿದ್ದರು. ಒಪ್ಪಂದದಲ್ಲಿ ಅಮೆರಿಕವು ಕೆಲವೊಂದು ಬದಲಾವಣೆ ಮಾಡಿದ್ದೇ ಪ್ರಧಾನಿ ಸಿಂಗ್‍ರ ಆಕ್ರೋಶಕ್ಕೆ ಕಾರಣವಾಗಿತ್ತು. ಸಿಂಗ್ ಅವರು ಪಟ್ಟು
ಬಿಡದ ಹಿನ್ನೆಲೆಯಲ್ಲಿ ಕೊನೆಗೆ ಅಮೆರಿಕವು ಭಾರತದ ಬೇಡಿಕೆಯನ್ನು ಒಪ್ಪಿತು.'' ಇದು ಐತಿಹಾಸಿಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿ ಅಂದಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ. ನಾರಾಯಣನ್ ಅವರು ಹೊರಹಾಕಿರುವ ಸತ್ಯ.
ವಾಷಿಂಗ್ಟನ್‍ನಲ್ಲಿ ಪರಮಾಣು ಒಪ್ಪಂದದ 10ನೇ ವಾರ್ಷಿಕೋತ್ಸವದ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾವೇಶದಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ.
ರೈಸ್ ಹೇಳಿಕೆಗೆ ಪ್ರತಿಕ್ರಿಯೆ: ಸಮಾವೇಶದಲ್ಲಿ ಮಾತನಾಡಿದ ಅಮೆರಿಕದ ಮಾಜಿ ವಿದೇಶಾಂಗ ಸಚಿವೆ ಕಾಂಡೊಲೀಸಾ ರೈಸ್ ಅವರು, ``2005ರ ಜು.18ರಂದು ಅಂದಿನ ಅಧ್ಯಕ್ಷ ಜಾರ್ಜ್ ಬುಷ್ ಅವರು ಒಪ್ಪಂದವನ್ನು ಘೋಷಣೆ ಮಾಡುವುದರಲ್ಲಿದ್ದರು. ಅದರ ಮೊದಲ ದಿನವೇ ಮನಮೋಹನ್‍ಸಿಂಗ್ ಅವರು ಒಪ್ಪಂದ ರದ್ದು ಮಾಡುವಂತೆ ಸೂಚಿಸಿದರು.

ಭಾರತದ ಪ್ರತಿಪಕ್ಷಗಳ ಒತ್ತಡವೇ ಇದಕ್ಕೆ ಕಾರಣ'' ಎಂದರು. ತಕ್ಷಣ ಇದಕ್ಕೆ ಪ್ರತಿಕ್ರಿಯಿಸಿದ ನಾರಾಯಣನ್, ``ಸಿಂಗ್ ಅವರು ಒಪ್ಪಂದ ರದ್ದು ಮಾಡುವಂತೆ ಸೂಚಿಸಲು ಕಾರಣ ಇದಲ್ಲ. ಈ ಬಗೆಗಿನ ಸತ್ಯವನ್ನು ನಾನು ಹೇಳಲೇಬೇಕು. ಅಂತಾರಾಷ್ಟ್ರೀಯ ಸುರಕ್ಷೆಗೆ ಒಳಪಡದಂತಹ ಭಾರತೀಯ ಅಣು ರಿಯಾಕ್ಟರ್‍ಗಳ ಸಂಖ್ಯೆಯನ್ನು 6ರಿಂದ 8 ಎಂದು ಮೊದಲೇ ನಿರ್ಧರಿಸಲಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ಅಮೆರಿಕವು ಈ ಸಂಖ್ಯೆಯನ್ನು 2ಕ್ಕಿಳಿಸಿತು. ಭಾರತಕ್ಕೆ ಎರಡೇ ರಿಯಾಕ್ಟರ್ ನೀಡುವ ಅಮೆರಿಕದ ನಿರ್ಧಾರ ಸಿಂಗ್‍ಗೆ ರುಚಿಸಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಒಪ್ಪಂದ ರದ್ದು ಮಾಡುವ ನಿರ್ಧಾರ ಕೈಗೊಂಡರು. ಈ ಬಗ್ಗೆ ಅಮೆರಿಕದೊಂದಿಗೆ ಚರ್ಚಿಸಿದ ಬಳಿಕ ಭಾರತದ ಬೇಡಿಕೆಗೆ ಒಪ್ಪಿತು. ನಂತರವಷ್ಟೇ ಸಿಂಗ್ ಐತಿಹಾಸಿಕ ಒಪ್ಪಂದಕ್ಕೆ ಹಸಿರು ನಿಶಾನೆ ತೋರಿದರು' ಎಂದಿದ್ದಾರೆ. ಇತಿಹಾಸದಲ್ಲಿ ದಾಖಲಾಗಲಿ: ``ಅಮೆರಿಕದಲ್ಲಿದ್ದ ಅನೇಕರು ಭಾರತಕ್ಕೆ ಪಾಠ ಕಲಿಸಬೇಕೆಂದಿದ್ದರು. ಆದರೆ, ಅಂದು ಸಿಂಗ್ ಅವರು ಅಮೆರಿಕಕ್ಕೆ ಕಠಿಣ ಸಂದೇಶ ರವಾನಿಸಿದರು. ಮನಮೋಹನ್‍ಸಿಂಗ್ ಅವರು ಶೇ.150ರಷ್ಟು ಬದ್ಧತೆ ತೋರಿಸದೇ ಇರುತ್ತಿದ್ದರೆ ಇಂತಹುದೊಂದು ಐತಿಹಾಸಿಕ ಒಪ್ಪಂದವೇ ನಡೆಯುತ್ತಿರಲಿಲ್ಲ ಎಂಬ ಸತ್ಯವು ಇತಿಹಾಸದ ಪುಟಗಳಲ್ಲಿ ದಾಖಲಾಗಬೇಕು. ಇದೇ ನನ್ನ ಆಸೆ'' ಎಂದೂ ಹೇಳಿದ್ದಾರೆ ನಾರಾಯಣನ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com