
ಜಮ್ಮು: ಗಿರ್‌ಧಾರಿ ಲಾಲ್ ಡೋಗ್ರಾ ಅವರಿಂದ ಅಧಿಕಾರಿಗಳು ಪಾಠ ಕಲಿಯಬೇಕಿದ್ದು, ಯಾರು ಸಾರ್ವಜನಿಕರಿಗಾಗಿ ದುಡಿಯುತ್ತಾರೋ ಅವರನ್ನು ದೇಶ ಎಂದಿಗೂ ಗೌರವಿಸುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ.
ಈ ಕುರಿತಂತೆ ಜಮ್ಮು-ಕಾಶ್ಮೀರದ ಸಚಿವ ಹಾಗೂ ಸಂಸದರಾಗಿದ್ದ ಡಿ.ಗಿರ್‌ಧಾರಿ ಲಾಲ್ ಡೋಗ್ರಾ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯ ರಂಗದಲ್ಲಿ ಕೆಲವು ವ್ಯಕ್ತಿಗಳಷ್ಟೇ ಸತ್ತನಂತರವೂ ಅವರು ಬದುಕಿರುವಂತೆಯೇ ಭಾಸವಾಗುತ್ತದೆ. ಗಿರ್‌ಧಾರಿ ಲಾಲ್ ಡೋಗ್ರಾ ಅವರ ರಾಜಕೀಯ ಅವಧಿಯಲ್ಲಿದ್ದ ಅಧಿಕಾರಿಗಳಾರು ಅಧಿಕಾರಕ್ಕಾಗಲಿ ಅಥವಾ ಹಣಕ್ಕಾಗಲಿ ಕೆಲಸ ಮಾಡುತ್ತಿರಲಿಲ್ಲ. ದೇಶದ ಅಭಿವೃದ್ಧಿಗಾಗಿ ಜನರ ಸೇವೆಯೇ ದೇವರ ಸೇವೆ ಎಂದು ಕೆಲಸ ಮಾಡುತ್ತಿದ್ದರು. ದೇಶಕ್ಕಾಗಿ ಗಿರ್‌ಧಾರಿ ಲಾಲ್ ಮಾಡಿದ ಸೇವೆಯನ್ನು ಎಲ್ಲರೂ ಸ್ಮರಿಸಬೇಕಿದ್ದು, ಅವರಿಂದ ಪಾಠ ಕಲಿಯಬೇಕಿದೆ. ಯಾರು ಸಾರ್ವಜನಿಕರ ಜೀವನಕ್ಕಾಗಿ ದುಡಿಯುತ್ತಾರೆಯೋ ಅವರನ್ನು ದೇಶ ಎಂದಿಗೂ ಸ್ಮರಿಸುತ್ತದೆ ಮತ್ತು ಗೌರವಿಸುತ್ತದೆ ಎಂದು ಹೇಳಿದರು.
ಇದಕ್ಕೂ ಮುನ್ನ, ಇಂದು ಬೆಳಿಗ್ಗೆ 11 ರ ಸುಮಾರಿಗೆ ಜಮ್ಮು ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಗವರ್ನರ್ ಎನ್.ಎನ್. ವೊಹ್ರಾ, ಮುಖ್ಯಮಂತ್ರಿ ಮುಫ್ತಿ ಮಹಮ್ಮದ್ ಸಯ್ಯೀದ್ ಹಾಗೂ ಕ್ಯಾಬಿನೆಟ್ ಮಂತ್ರಿಗಳು ಸ್ವಾಗತಿಸಿದರು.
ಜಮ್ಮು-ಕಾಶ್ಮೀರದ ಸಚಿವ ಹಾಗೂ ಸಂಸದರಾಗಿದ್ದ ಡಿ. ಗಿರ್‌ಧಾರಿ ಲಾಲ್ ಡೋಗ್ರಾ ಅವರ ಜನ್ಮ ಶತಮಾನೋತ್ಸವದಲ್ಲಿ ಭಾಗವಹಿಸಲು ಮೋದಿ ಇಂದು ಜಮ್ಮುವಿಗೆ ಭೇಟಿ ನೀಡಿದ್ದು, ಇಫ್ತಾರ್ ಕೊಡುಗೆಯಾಗಿ ರಾಜ್ಯದ ಅಭಿವೃದ್ಧಿಗೆ 70 ಸಾವಿರ ಕೋಟಿ ರೂ. ಪ್ಯಾಕೇಜ್ ಪ್ರಕಟಿಸುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.
ಡೋಗ್ರಾ ಅವರು ಕಥುವಾ ಜಿಲ್ಲೆಯವರಾಗಿದ್ದು, ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಪತ್ನಿ ಕೂಡ ಅದೇ ಜಿಲ್ಲೆಯವರು. ಡೋಗ್ರಾ ಜೇಟ್ಲಿ ಅವರ ಮಾವ ಕೂಡ. ಹೀಗಾಗಿ ಜೇಟ್ಲಿ ಅವರನ್ನು ಕೂಡ ಪ್ರಧಾನಿ ಜತೆ ಆಹ್ವಾನಿಸಲಾಗಿದೆ. ಪ್ರಧಾನಿ ಘೋಷಿಸುವ ಅಭಿವೃದ್ಧಿ ಪ್ಯಾಕೇಜ್‌ನಲ್ಲಿ 2014ರ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕೂಡ ಒಳಗೊಳ್ಳಲಿದೆ. ಪಿಡಿಪಿ-ಬಿಜೆಪಿ ಸರಕಾರದ ಮುಖ್ಯ ಭರವಸೆಯಾದ ಪುನರ್ವಸತಿ ಮತ್ತು ಅಭಿವೃದ್ಧಿಗೆ ಸಹ ಈ ಹಣ ಬಳಕೆಯಾಗಲಿದೆ ಎನ್ನಲಾಗಿದೆ.
Advertisement