ನವದೆಹಲಿ: ಜಾತಿಗಣತಿ ವಿವರ ಸದ್ಯಕ್ಕಂತು ಬಿಡುಗಡೆಯಾಗುವ ಲಕ್ಷಣ ಕಾಣುತ್ತಿಲ್ಲ. ರಾಜಕೀಯ ಕಾರಣಕ್ಕಾಗಿ ಜಾತಿಗಣತಿ ಮಾಹಿತಿ ಮುಚ್ಚಿಟ್ಟ ಆರೋಪಕ್ಕೆ ಗುರಿಯಾಗಿರುವ ಕೇಂದ್ರ ಸರ್ಕಾರ ಈಗ ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್ ಪನಾಗಾರಿಯಾ ನೇತೃತ್ವದಲ್ಲಿ ಜಾತಿ ವಿವರ ತಾಳೆಹಾಕಲು ತಜ್ಞರ ಸಮಿತಿ ರಚಿಸಲು ನಿರ್ಧರಿಸಿದೆ. ಆ ಬಳಿಕವೇ ಜಾತಿ ಗಣತಿ ವಿವರವನ್ನು ಸರ್ಕಾರ ಬಹಿರಂಗ ಮಾಡಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಗುರುವಾರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಕುರಿತು ಬಳಿಕ ಮಾಹಿತಿ ನೀಡಿದ ಹಣಕಾಸು ಸಚಿವ
ಅರುಣ್ ಜೇಟ್ಲಿ, ಜಾತಿಗಣತಿಯ ವಿವರವನ್ನು ತಾಳೆಹಾಕಲು ಈ ಸಮಿತಿ ರಚಿಸಲಾಗಿದೆ. ಈ ಕಾರ್ಯ ಮುಗಿದ ಬಳಿಕ ಜಾತಿ ವಿವರಗಳನ್ನು ಬಹಿರಂಗಪಡಿಸಲಾಗುವುದು. ಜಾತಿಗಣತಿ
ಬಹಿರಂಗ ಮಾಡುವುದನ್ನು ವಿಳಂಬ ಮಾಡಲೆಂದು ಸಮಿತಿ ರಚಿಸುತ್ತಿಲ್ಲ. ಇದು ಯುಪಿಎ ಸರ್ಕಾರದದ್ದೇ ನಿರ್ಧಾರ. ಜಾತಿಗಣತಿಗೆ ಅನುಮತಿ ನೀಡುವಾಗಲೇ ಮೇ 2011ರಂದು ಈ ರೀತಿಯ ಸಮಿತಿ ರಚಿಸುವ ನಿರ್ಧಾರ ಮಾಡಲಾಗಿತ್ತು ಎಂದು ಹೇಳಿದ್ದಾರೆ. ಸಾಮಾಜಿಕ, ಆರ್ಥಿಕ ಹಾಗೂ ಜಾತಿಗಣತಿ ವಿವರವನ್ನು ಜು.3ರಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿತ್ತು. ಆದರೆ, ಈ ಜಾತಿ ಆಧಾರಿತ ಅಂಕಿ- ಅಂಶಗಳನ್ನು ಮಾತ್ರ ಸರ್ಕಾರ ಮುಚ್ಚಿಟ್ಟಿತ್ತು. ಮುಂಬರುವ ಬಿಹಾರ ಚುನಾವಣೆಯನ್ನು ಮುಂದಿಟ್ಟು ಕೊಂಡು ಸರ್ಕಾರ ಜಾತಿಗಣತಿ ಮಾಹಿತಿ ಯನ್ನು ಮುಚ್ಚಿಟ್ಟಿದೆ ಎಂದು ಪ್ರತಿಕ್ಷಗಳು ಆರೋಪಿಸಿದ್ದವು. ಆದರೆ, ಈ ಆರೋಪವನ್ನು ಜೇಟ್ಲಿ ತಳ್ಳಿಹಾಕಿದ್ದಾರೆ. ಇದರ ಹಿಂದೆ ಯಾವುದೇ ರಾಜಕೀಯ ಕಾರಣಗಳಿಲ್ಲ. ಯಾವೆಲ್ಲ ರಾಜ್ಯಗಳು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿವೆಯೋ ಆ ಎಲ್ಲ ರಾಜ್ಯಗಳು ಮೊದಲು ಜಾತಿ ಕ್ರೋಡೀಕರಣಕ್ಕೆ ಸಂಬಂಧಿಸಿದ ಶಿಫಾರಸುಗಳನ್ನು ಮೊದಲು ನೀಡಲಿ ಎಂದು ಸವಾಲು ಹಾಕಿದ್ದಾರೆ.
ರು. 8,548 ಕೋಟಿ ವಿದ್ಯುತ್ ಯೋಜನೆಗೆ ಒಪ್ಪಿಗೆ: ಕರ್ನಾಟಕ ಸೇರಿ ದಕ್ಷಿಣ ಮತ್ತು ಮಧ್ಯಭಾರತದ ಏಳು ರಾಜ್ಯಗಳನ್ನು ಸಂಪರ್ಕಿಸುವ ರು.8,548 ಕೋಟಿ ವಿದ್ಯುತ್ ಪೂರೈಕೆ ಯೋಜನೆಗೆ ಸರ್ಕಾರ ಒಪ್ಪಿಗೆ ನೀಡಿದೆ. ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನ, ಗುಜರಾತ್, ಆಂಧ್ರ ಪ್ರದೇಶ, ಮಹಾರಾಷ್ಟ್ರ ಈ ಯೋಜನೆಯ ವ್ಯಾಪ್ತಿಗೆ ಬರುವ ಇತರೆ ರಾಜ್ಯಗಳು. ಈ ಯೋಜನೆಗೆ ರಾಷ್ಟ್ರೀಯ ಹಸಿರು ಇಂಧನ ನಿಧಿ(ಎನ್‍ಸಿಇಎಫ್)ಯಿಂದ ರು.3,419.47 ಕೋಟಿ ನೀಡಲಾಗುವುದು. ಯೋಜನೆಯಡಿ ಹೊಸದಾಗಿ 48 ಹೊಸ ಗ್ರಿಡ್ ಉಪಕೇಂದ್ರಗಳನ್ನು ನಿರ್ಮಿಸಲಾಗುವುದು. ಈ ಯೋಜನೆ ಮುಂದಿನ 5 ವರ್ಷದೊಳಗೆ ಪೂರ್ಣಗೊಳ್ಳುವ ನಿರೀ ಇದೆ. ಯೋಜನೆಯ ಶೇ. 20ರಷ್ಟು ವೆಚ್ಚವನ್ನು ರಾಜ್ಯವೇ ಭರಿಸಲಿದೆ.
ರಾಜ್ಯದಲ್ಲಿ ಚಂಡಮಾರುತ ಅಪಾಯ ತಗ್ಗಿಸುವ ಯೋಜನೆ: ಕರ್ನಾಟಕ ಸೇರಿಬಹುತೇಕ ಎಲ್ಲ ಸಮುದ್ರ ತೀರದ ರಾಜ್ಯಗಳಲ್ಲಿ ಚಂಡಮಾರುತದಿಂದಾಗುವ ಹಾನಿ ಕಡಿಮೆ ಮಾಡುವ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಸಂಬಂಧ ಮೊದಲ ಹಂತದ ಯೋಜನೆಯು ಆಗಾಗ್ಗೆ ಚಂಡಮಾರುತದ ಹೊಡೆತಕ್ಕೆ ನಲುಗುವ ಆಂಧ್ರ ಮತ್ತು ಒಡಿಶಾದಲ್ಲಿ ಅನುಷ್ಠಾನಕ್ಕೆ ಬರಲಿದೆ. ಎರಡನೇ ಹಂತದ ಯೋಜನೆ ಕರ್ನಾಟಕ, ಗೋವಾ, ಗುಜರಾತ್, ಕೇರಳ, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ಅನುಷ್ಠಾನಕ್ಕೆ ಬರಲಿದೆ. ಎರಡನೇ ಹಂತದ ಯೋಜನೆಗೆ ಕೇಂದ್ರ ಸರ್ಕಾರ ವಿಶ್ವಬ್ಯಾಂಕ್ ಮೂಲಕ ರು. 1,881.20 ಕೋಟಿ ನೀಡಲಿದೆ. ಈ ಯೋಜನೆಯ ಮುಖ್ಯ ಉದ್ದೇಶ ಕರಾವಳಿ ತೀರದ ಜನರಿಗೆ ಚಂಡಮಾರುತ ಕುರಿತು ಮುನ್ಸೂಚನೆ, ಎಚ್ಚರಿಕೆ ನೀಡುವುದು, ಚಂಡಮಾರುತ ಕೇಂದ್ರಗಳನ್ನು, ಅಂಡರ್‍ಗ್ರೌಂಡ್ ಕೇಬಲ್ ನಂತ ಸೌಲಭ್ಯಗಳನ್ನು ಕಲ್ಪಿಸುವುದೇ ಆಗಿದೆ. ಈ ಮೂಲಕ ಚಂಡಮಾರುತದಿಂದ ಆಗುವ ಜೀವಹಾನಿ, ಆಸ್ತಿಪಾಸ್ತಿ ಹಾನಿಯನ್ನು ಕಡಿಮೆ ಮಾಡುವುದು ಸರ್ಕಾರದ ಗುರಿ.
ಇತರ ಪ್ರಮುಖ ನಿರ್ಧಾರಗಳು
ಎಫ್ ಡಿಐ ಸ್ವರೂಪ ಸರಳಗೊಳಿಸಲು ಸರ್ಕಾರ ಹೊಸದಾಗಿ ಏಕೀಕೃತ ನೀತಿ ಜಾರಿಗೆ ತರಲು ನಿರ್ಧಾರ.
ಮೆಟ್ರೋ ಸಿಟಿ, ಪ್ರಮುಖ ನಗರಗಳು, ಧಾರ್ಮಿಕ ಕೇಂದ್ರಗಳು ಮತ್ತು ಪ್ರವಾಸಿ ತಾಣಗಳು ಸೇರಿ ದೇಶದಲ್ಲಿ ಒಟ್ಟು 400 ರೈಲ್ವೆ ನಿಲ್ದಾಣಗಳನ್ನು ಖಾಸಗಿಯವರ ಸಹಯೋಗದಲ್ಲಿ ಮರು ಅಭಿವೃದ್ಧಿ
ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‍ಗಳಿಗೆ ಹೆಚ್ಚುವರಿಯಾಗಿ ರು.700 ಕೋಟಿ ಬಂಡವಾಳ ಮರುಪೂರಣ.
295 ಹಳೆಯ ಕಾನೂನು ತೆಗೆದು ಹಾಕುವ ವಿಧೇಯಕಕ್ಕೆ ಒಪ್ಪಿಗೆ
Advertisement