ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸಿ

ವೈವಾಹಿಕ ಅತ್ಯಾಚಾರಕ್ಕೆ ಸಂಬಂಧಿಸಿ ಸರ್ಕಾರವೇ ನೇಮಿಸಿದ್ದ ಸಮಿತಿಯು ಸರ್ಕಾರದ ಅಭಿಪ್ರಾಯಕ್ಕೆ ವ್ಯತಿರಿಕ್ತವಾದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ವೈವಾಹಿಕ ಅತ್ಯಾಚಾರಕ್ಕೆ ಸಂಬಂಧಿಸಿ ಸರ್ಕಾರವೇ ನೇಮಿಸಿದ್ದ ಸಮಿತಿಯು ಸರ್ಕಾರದ ಅಭಿಪ್ರಾಯಕ್ಕೆ ವ್ಯತಿರಿಕ್ತವಾದ ವರದಿ ನೀಡಿದೆ. ಕೇಂದ್ರ ಸರ್ಕಾರವು ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸಲಾಗದು ಎಂದು ಹೇಳಿದ್ದರೆ, ಸಮಿತಿಯು ತನ್ನ ವರದಿಯಲ್ಲಿ ಇದನ್ನು ಅಪರಾಧವೆಂದು ಪರಿಗಣಿಸಬೇಕು ಎಂದು ಶಿಫಾರಸು ಮಾಡಿದೆ.
ಇತ್ತೀಚೆಗೆಷ್ಟೇ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ವರದಿ ಸಲ್ಲಿಸಿರುವ ರಾಮ್ ರಜಪೂತ್ ಸಮಿತಿಯು ಮಹಿಳೆಯರ ಪರ ಧ್ವನಿಯೆತ್ತಿದೆ. ಪತ್ನಿಯ ವಯಸ್ಸು ಮತ್ತು ಆರೋಪಿಯೊಂದಿಗಿನ ಸಂಬಂಧವು ಏನೇ ಆಗಿದ್ದರೂ ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿ ಸಬೇಕು ಎಂದು ಶಿಫಾರಸು ಮಾಡಿದೆ. ಸೋಮವಾರ ಅಂತರ್-ಸಚಿವಾಲಯದ ಸಮಾಲೋಚನಾ ಸಭೆಯಲ್ಲಿ ಈ ಶಿಫಾರಸುಗಳ ಬಗ್ಗೆ ಚರ್ಚೆ ನಡೆಯಲಿದೆ. ಈ ಹಿಂದೆ ಈ ಬಗ್ಗೆ ಮಾತನಾಡಿದ್ದ ಸಚಿವೆ ಮನೇಕಾ ಗಾಂಧಿ, ``ವೈವಾಹಿಕ ಅತ್ಯಾಚಾರವು ಮಹಿಳೆಯರ ಮೇಲಿನ ದೌರ್ಜನ್ಯವಾಗಿದ್ದು, ಅದನ್ನು ಒಪ್ಪಲಾಗದು'' ಎಂದಿದ್ದರು. ಆದರೆ, ಕೇಂದ್ರ ಸರ್ಕಾರ ಮಾತ್ರ ಈ ವಿಚಾರದಲ್ಲಿ ವ್ಯತಿರಿಕ್ತ ನಿಲುವು ತಳೆದಿತ್ತು. ಈ ಬಗ್ಗೆ ಸಂಸತ್‍ನಲ್ಲಿ ಮಾತನಾಡಿದ್ದ ಗೃಹ ಖಾತೆ ಸಹಾಯಕ ಸಚಿವ ಹರಿಭಾಯಿ ಪಾರ್ಥಿ ಭಾಯಿ ಚೌಧರಿ, ``ವೈವಾಹಿಕ ಅತ್ಯಾಚಾರ ಎಂಬ ಪರಿಕಲ್ಪನೆಯನ್ನು ಅಂತಾರಾಷ್ಟ್ರೀಯ ವಾಗಿ ಗ್ರಹಿಸಲಾಗಿದ್ದರೂ, ಅದು ಭಾರತಕ್ಕೆ ಅಷ್ಟಾಗಿ ಅನ್ವಯಿಸುವುದಿಲ್ಲ. ಇಲ್ಲಿನ ಶಿಕ್ಷಣದ ಮಟ್ಟ, ಅನಕ್ಷರತೆ, ಬಡತನ, ಅಸಂಖ್ಯ ಸಾಮಾಜಿಕ ಕಟ್ಟುಪಾಡುಗಳು, ಧಾರ್ಮಿಕ ನಂಬಿಕೆಗಳು, ಮದುವೆ ಎಂಬುದು ಪವಿತ್ರ ಎಂಬ ಸಮಾಜದ ಮನಸ್ಥಿತಿಯೇ ಇದಕ್ಕೆ ಕಾರಣ'' ಎಂದಿದ್ದರು. ಈ ಹೇಳಿಕೆಗೆ ಮಹಿಳಾ ಹಕ್ಕುಗಳ ಸಂಘಟನೆಗಳು ಮತ್ತು ಹೋರಾಟಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com