
ನವದೆಹಲಿ: ಒಂದು ಕಡೆ ವಿವಾದಾತ್ಮಕ ಭೂಸ್ವಾಧೀನ ವಿಧೇಯಕದ ಅಂಗೀಕಾರಕ್ಕಾಗಿ ನರೇಂದ್ರ ಮೋದಿ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಮತ್ತೊಂದು ಕಡೆ ಕೇಂದ್ರ ಸರ್ಕಾರವನ್ನು ಪೇಚಿಗೆ ಸಿಲುಕಿಸಲು ಪ್ರತಿಪಕ್ಷಗಳು ಸನ್ನದ್ಧವಾಗಿವೆ.
ರಾಜ್ಯಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ವಿರುದ್ಧ ಕೇಳಿಬಂದಿರುವ ಆರೋಪವನ್ನೇ ಅಸ್ತ್ರವನ್ನಾಗಿ ಬಳಸಲು ಮುಂದಾಗಿರುವ ಪ್ರತಿಪಕ್ಷಗಳನ್ನು ತಣ್ಣಗಾಗಿಸಲು ಮತ್ತು ಸುಗಮ ಕಲಾಪಕ್ಕಾಗಿ ಸೋಮವಾರ ದೆಹಲಿಯಲ್ಲಿ ಸರ್ವ ಪಕ್ಷ ಸಭೆ ಕರೆಯಲಾಗಿತ್ತು.
ಸರ್ವ ಪಕ್ಷ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, 'ನಾವು ಭೂಸ್ವಾಧೀನ ಮಸೂದೆಯೊಂದಿಗೆ ಮುಂದುವರೆಯಬೇಕು' ಎಂದು ಹೇಳಿದರು.
ನಾಳೆಯಿಂದ ಆರಂಭವಾಗುವ ಮುಂಗಾರು ಅಧಿವೇಶನದಲ್ಲಿ ಸುಗಮ ಕಲಾಪಕ್ಕೆ ಸಹಕರಿಸುವಂತೆ ಪ್ರತಿಪಕ್ಷಗಳಿಗೆ ಮನವಿ ಮಾಡಿದ ಪ್ರಧಾನಿ, ಸುಗಮ ಕಲಾಪಕ್ಕೆ ಸರ್ಕಾರ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಇದರಲ್ಲಿ ಪ್ರತಿಪಕ್ಷಗಳ ಜವಾಬ್ದಾರಿಯೂ ಇದೆ ಎಂದರು.
ಸದನದಲ್ಲಿ ಎಲ್ಲಾ ವಿಷಯಗಳ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳಿಗೆ ಭರವಸೆ ನೀಡಿದರು.
Advertisement