
ನವದೆಹಲಿ: 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಅಪರಾಧಿ ಯಾಕೂಬ್ ಮೆಮನ್‌ಗೆ ಗಲ್ಲು ಶಿಕ್ಷೆ ಖಚಿತವಾಗಿದ್ದು, ಇದೇ ಜುಲೈ 30ರಂದು ಗಲ್ಲಿಗೇರಿಸುವ ಸಾಧ್ಯತೆ ಇದೆ.
ಗಲ್ಲು ಶಿಕ್ಷೆ ರದ್ದು ಕೋರಿ ಯಾಕೂಬ್ ಮೆಮನ್ ಸಲ್ಲಿಸಿದ್ದ ಕ್ಯೂರೇಟಿವ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಹೀಗಾಗಿ ಇದೇ ತಿಂಗಳು 30ರಂದು, ಮಹಾರಾಷ್ಟ್ರದ ನಾಗ್ಪುರ ಸೆಂಟ್ರಲ್ ಜೈಲಿನಲ್ಲಿ ಬೆಳಿಗ್ಗೆ 7 ಗಂಟೆಗೆ ಗಲ್ಲಿಗೇರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಟೈಗರ್ ಮೆಮನ್ ಸಹೋದರನಾದ ಯಾಕೂಬ್ ಮೆಮನ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ. ತನ್ನ ಅಣ್ಣನ ಭಯೋತ್ಪಾದನೆ ಕೃತ್ಯಗಳಿಗೆ ಸಹಕಾರಿಯಾಗಿದ್ದ ಎಂದು ಪೊಲೀಸರು 1994ರಲ್ಲಿ ಈತನನ್ನು ನೇಪಾಳದ ಕಠ್ಮಂಡುವಿನಲ್ಲಿ ಬಂಧಿಸಿದ್ದರು.
ಸುದೀರ್ಘ ವಿಚಾರಣೆ ನಡೆದು ಟಾಡಾ ನ್ಯಾಯಾಲಯ 2007ರ ಜುಲೈ 27ರಂದು ಆರೋಪ ಸಾಬೀತಾದ ಹಿನ್ನಲೆಯಲ್ಲಿ ಮೆಮನ್ ಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ನಂತರ ಆತ ಮುಂಬೈ ಹೈಕೋರ್ಟ್ ಮೊರೆ ಹೋಗಿದ್ದ, ಅಲ್ಲೂ ಕೂಡ ಆತನ ಶಿಕ್ಷೆ ಕಾಯಂಗೊಂಡಿತ್ತು. ಇದಾದ ನಂತರ 2013ರಲ್ಲಿ ಸುಪ್ರೀಂ ಕೋರ್ಟ್ ಅಂಗಳದಲ್ಲೂ ಪ್ರಕರಣದ ವಿಚಾರಣೆ ನಡೆದು ಕೆಳ ಹಂತದ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿಯಲಾಗಿತ್ತು.
1993ರ ಮಾರ್ಚ್ನಲ್ಲಿ ಮುಂಬೈನ 13 ಸ್ಥಳಗಳಲ್ಲಿ ಸ್ಫೋಟ ಸಂಭವಿಸಿತ್ತು, ಸ್ಫೋಟದಲ್ಲಿ 257 ಮಂದಿ ಮೃತಪಟ್ಟು, 717 ಮಂದಿ ಗಾಯಗೊಂಡಿದ್ದರು. ಸಿಬಿಐ ಇದರ ತನಿಖೆ ನಡೆಸಿ ದಾವೂದ್ ಇಬ್ರಾಹೀಂ ಸೇರಿದಂತೆ ಹಲವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
Advertisement