ಬಿಬಿಎಫ್ ಯಂತ್ರ ಖರೀದಿ ಹಗರಣ: ವರದಿ ಕೇಳಿದ ಮುಖ್ಯಮಂತ್ರಿ ಫಡ್ನವಿಸ್

ಬೀಜಗಳ ಬಿತ್ತನೆಗೆ ಖರೀದಿಸಲಾದ ಬ್ರಾಡ್ ಬೆಡ್ ಫರೋ(ಬಿಬಿಎಫ್) ಯಂತ್ರಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ...
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್
Updated on

ಮುಂಬೈ: ಬೀಜಗಳ ಬಿತ್ತನೆಗೆ ಖರೀದಿಸಲಾದ ಬ್ರಾಡ್ ಬೆಡ್ ಫರೋ(ಬಿಬಿಎಫ್) ಯಂತ್ರಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ವರದಿ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ನಿನ್ನೆ ಪ್ರಕಟವಾದ ಹಿನ್ನೆಲೆಯಲ್ಲಿ ಖರೀದಿಗೆ ಸಂಬಂಧಪಟ್ಟಂತೆ  ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಕೃಷಿ ಮತ್ತು ಕೈಗಾರಿಕ ಅಭಿವೃದ್ಧಿ ಮಂಡಳಿಯಿಂದ(ಎಂಎಐಡಿಸಿ) ವರದಿ ಕೇಳಿದ್ದಾರೆ.

ಪತ್ರಿಕೆಗೆ ಸಿಕ್ಕಿರುವ ನಿಖರ ಮಾಹಿತಿ ಪ್ರಕಾರ, ಮುಖ್ಯಮಂತ್ರಿಗಳು ಕೃಷಿ ಮತ್ತು ಕೈಗಾರಿಕಾ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಅರವಿಂದ್ ಕುಮಾರ್ ಅವರಿಂದ ಸಂಪೂರ್ಣ ವರದಿ ಕೇಳಿರುವುದಾಗಿ ತಿಳಿದುಬಂದಿದೆ.

ಪುಣೆಯ ಬೊರ್ಬಾಜಿ ಉತ್ಪಾದನ ಸಂಸ್ಥೆ ಯಂತ್ರ ಖರೀದಿಯಲ್ಲಿ ಹಾಗೂ ಟೆಂಡರ್ ನಲ್ಲಿ ಆದ ಅಕ್ರಮದ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಬರೆದ ಪತ್ರದ ಪ್ರತಿಯನ್ನು ಸೇರಿಸಿ ಜೂನ್ 6ರಂದು ಕೃಷಿ ಇಲಾಖೆಯ ಅಧಿಕಾರಿ ಸಿ.ಡಿ.ಅಧ್ಯಾಪಕ್ ಅವರು ಸಹಿ ಮಾಡಿದ ಪತ್ರವನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಿದ್ದು, ಅದರಲ್ಲಿ ಸಂಪೂರ್ಣ ತನಿಖೆ ನಡೆಸುವುದಾಗಿ ತಿಳಿಸಲಾಗಿದೆ.

ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿರುವ ತನಿಖೆ ಪ್ರಕಾರ, ಮಹಾಶಕ್ತಿ ಅಗ್ರೋ, ಎಸ್.ಆರ್.ಇಂಜಿನಿಯರಿಂಗ್, ಸಾಯಿ ಅಗ್ರೋ ಟೆಕ್, ಪ್ರಭು ಅಗ್ರೋ ಮತ್ತು ಬಾಲಾಜಿ ಅಂಡ್ ಕಂಪೆನಿಗಳು ಯಂತ್ರಗಳ ಉತ್ಪಾದನೆಯನ್ನು ಗುಜರಾತ್ ನ ರಾಜ್ ಕೋಟ್ ಮೂಲದ ಎರಡು ಕಂಪೆನಿಗಳಿಗೆ ಹೊರಗುತ್ತಿಗೆ ನೀಡಿದ್ದವು. ಆದರೆ ಗುತ್ತಿಗೆ ನಿಯಮದ ಪ್ರಕಾರ, ಯಂತ್ರಗಳ ತಯಾರಿಕೆಯನ್ನು ಹೊರಗುತ್ತಿಗೆ ನೀಡುವಂತಿರಲಿಲ್ಲ.

ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ನಂತರ ಸ್ಪಷ್ಟನೆ ನೀಡಿರುವ ಮಂಡಳಿ, ಯಂತ್ರಗಳ ಕೆಲವು ಭಾಗಗಳ ತಯಾರಿಕೆಯನ್ನು ಉಪ ಗುತ್ತಿಗೆಯನ್ನು ನಿಯಮದ ಪ್ರಕಾರವೇ ನೀಡಲಾಗಿದ್ದು, ಯಂತ್ರಗಳು ಉತ್ತಮವಾಗಿಯೇ ಇವೆ. ಸಾಗರ್ ಇಂಟರ್ ನ್ಯಾಷನಲ್ ಕಂಪೆನಿ 2013-14ರಲ್ಲಿ ಬಿಡ್ಡಿಂಗ್ ನಲ್ಲಿ ಭಾಗವಹಿಸಿರಲಿಲ್ಲ. ಅವರು 2015-16ರಲ್ಲಿ ಬಿಡ್ಡಿಂಗ್ ನಲ್ಲಿ ಪಾಲ್ಗೊಳ್ಳುವುದಾಗಿ ಅರ್ಜಿ ಹಾಕಿದ್ದರು. ಕೃಷಿ ಆಯುಕ್ತರವರೆಗೆ ಈ ಪ್ರಕ್ರಿಯೆ ಮುಂದುವರಿಯುತ್ತದೆ. ಹಾಗಾಗಿ ಕಂಪೆನಿಗಳ ದರವನ್ನು ನಾವು ಬಹಿರಂಗಪಡಿಸುವುದಿಲ್ಲ ಎಂದು ತಿಳಿಸಿದೆ.

ಯಂತ್ರಕ್ಕೆ ಬೇಡಿಕೆ ಹೆಚ್ಚಾದ್ದರಿಂದ ಮಾರಾಟಗಾರರ ಸಂಖ್ಯೆಯನ್ನು ಹೆಚ್ಚು ಮಾಡಿದೆವು. 2013 ಏಪ್ರಿಲ್ ನಿಂದ ಮಾರ್ಚ್ 2015ರವರೆಗೆ 76 ಕೋಟಿ ರೂಪಾಯಿಯ 16 ಸಾವಿರ ಯಂತ್ರಗಳನ್ನು ವಿತರಿಸಿದ್ದೇವೆ, 125 ಕೋಟಿ ರೂಪಾಯಿ ಅಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ. ಅದರ ವ್ಯವಸ್ಥಾಪಕ ನಿರ್ದೇಶಕ ಅರವಿಂದ ಕುಮಾರ್ ಪ್ರತಿಕ್ರಿಯೆಗೆ ಸಿಗಲಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಕೃಷಿ ಸಚಿವ ಏಕ್ ನಾಥ್ ಖಡ್ಸೆ, ಸರ್ಕಾರ ಯಾವುದೇ ತನಿಖೆಗೆ ಮತ್ತು ಯಾವುದೇ ಸಂಸ್ಥೆಯಿಂದ ತನಿಖೆ ನಡೆಸಲು ಸಿದ್ಧವಿದೆ. ಯಂತ್ರಗಳ ಉತ್ಪಾದನೆಗೆ ಟೆಂಡರ್ ಕರೆಯುವುದು, ವಿತರಣೆ ಈ ಎಲ್ಲಾ ಪ್ರಕ್ರಿಯೆಗಳನ್ನು ಕೃಷಿ ಮತ್ತು ಕೈಗಾರಿಕ ಮಂಡಳಿ ನಡೆಸಿತ್ತು. ಇದರಲ್ಲಿ ಅವ್ಯವಹಾರವಾಗಿರುವುದು ಸಾಬೀತಾದಲ್ಲಿ ಅಂಥವರ ವಿರುದ್ಧ ಮೊಕದ್ದಮೆ ದಾಖಲಿಸಲಾಗುವುದು ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com