
ನವದೆಹಲಿ: ಆನ್‍ಲೈನ್ ರಿಟೇಲರ್‍ಗಳ ಅಬ್ಬರದಲ್ಲಿ ಕುಗ್ಗಿಹೋಗಿದ್ದ ನಮ್ಮ ಕಿರಾಣಿ ಅಂಗಡಿಗಳು ಮತ್ತೆ ಮೇಲೇಳಲು ಪ್ರಯತ್ನಿಸುತ್ತಿವೆ. ಅದೂ ಆನ್‍ಲೈನ್‍ನ ಏಣಿಯನ್ನು ಹತ್ತಿಕೊಂಡು! ಇವರ ಪ್ರಯತ್ನ ಯಶಸ್ಸಾದರೆ ನಾವೆಲ್ಲರೂ ಮನೆಯಲ್ಲೇ ಕುಳಿತು ಅಕ್ಕಿ, ಬೇಳೆಯಂತಹ ದಿನಸಿ ಸಾಮಗ್ರಿಗಳಿಗೆ ಆರ್ಡರ್ ಮಾಡಬಹುದು.
ಫ್ಲಿಪ್‍ಕಾರ್ಟ್, ಸ್ನ್ಯಾಪ್‍ಡೀಲ್ ಮೂಲಕ ಹೇಗೆ ಎಲೆಕ್ಟ್ರಾನಿಕ್ಸ್, ಉಡುಪು ಮತ್ತಿತರ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುತ್ತೇವೆಯೋ ಅದೇ ರೀತಿ ದಿನಸಿಯನ್ನೂ ಮನೆಗೇ ತರಿಸಿಕೊಳ್ಳಬಹುದು. ಹೌದು. ಅಖಿಲ ಭಾರತ ವರ್ತಕರ ಒಕ್ಕೂಟ(ಸಿಎಐಟಿ)ದ ಮೂಲಕ ಸಾಂಪ್ರದಾಯಿಕ ಕಿರಾಣಿ ಅಂಗಡಿಗಳೆಲ್ಲ ಒಂದೇ ಸೂರಿನಡಿ ಬಂದಿವೆ. ಅಷ್ಟು ಮಾತ್ರವಲ್ಲ, ಕಿರಾಣಿ ಅಂಗಡಿ ಮಾಲೀಕರೆಲ್ಲ ಸೇರಿ ಆನ್‍ಲೈನ್ ಲೋಕಕ್ಕೆ ಪ್ರವೇಶಿಸಲು ಎಲ್ಲ ಸಿದ್ಧತೆಯನ್ನೂ ನಡೆಸಿದ್ದಾರೆ. ರಾಷ್ಟ್ರವ್ಯಾಪಿ ಆನ್‍ಲೈನ್ ಮಾರುಕಟ್ಟೆ ಮಾಡುವುದು ಇವರ ಗುರಿ.
ನಾಗ್ಪುರದಲ್ಲಿ ಇ-ಲಾಲಾ: ತಮ್ಮ ಆನ್‍ಲೈನ್ ಮಾರುಕಟ್ಟೆಗೆ ಇವರು ಇಟ್ಟಿರುವ ಹೆಸರೇ ಇ-ಲಾಲಾ. ಮುಂದಿನ ತಿಂಗಳು ನಾಗ್ಪುರದಲ್ಲಿ ಪ್ರಾಯೋಗಿಕ ಯೋಜನೆ ಜಾರಿಯಾಗಲಿದೆ. ನಂತರ 3-4 ತಿಂಗಳಲ್ಲಿ ರಾಷ್ಟ್ರಾದ್ಯಂತ ಇ-ಲಾಲಾ ಕಾರ್ಯಾರಂಭಿಸಲಿದೆ. ಇದಕ್ಕಾಗಿ ಈಗಾಗಲೇ ಎಲ್ಲ ನಗರಗಳಲ್ಲೂ ತಾಂತ್ರಿಕ ತಂಡವೊಂದು ಕಾರ್ಯನಿರ್ವಹಿಸುತ್ತಿದ್ದು, ಸುತ್ತಮುತ್ತಲ ಹಳ್ಳಿಗಳ ಕಿರಾಣಿ ಅಂಗಡಿ ಮಾಲೀಕರಿಗೂ ಈ ಬಗ್ಗೆ ಮಾಹಿತಿ ನೀಡುತ್ತಿದೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಹಣ ಪಾವತಿ ಹೇಗೆ?: ಸ್ಥಳೀಯ ಕಿರಾಣಿ ಅಂಗಡಿ ಮಾಲೀಕರಿಗೆ ನೆಟ್ ಬ್ಯಾಂಕಿಂಗ್ ಖಾತೆ ತೆರೆದುಕೊಡುವ ಕೆಲಸ ತಾಂತ್ರಿಕ ತಂಡ ಮಾಡುತ್ತಿದೆ. ಇದರ ಮೂಲಕ ಆನ್‍ಲೈನ್ ವಹಿವಾಟು ನಡೆಸುವುದು ಸಿಎಐಟಿ ಉದ್ದೇಶ. ಮೊದಲಿಗೆ ಅಂಗಡಿ ಮಾಲೀಕರು ಹಣವನ್ನು ನೆಟ್ ಬ್ಯಾಂಕಿಂಗ್‍ನಿಂದ ಪಡೆದು, ನಂತರ ಸಾಮಗ್ರಿಗಳನ್ನು ಗ್ರಾಹಕರ ಮನೆಗೆ ರವಾನಿಸುತ್ತಾರೆ. ಕ್ಯಾಷ್-ಆನ್-ಡೆಲಿವರಿ ಮಾದರಿ ಬಗ್ಗೆಯೂ , ದಿನಸಿ ತಲುಪಿಸುವ ಡೆಲಿವರಿ ಬಾಯ್ ಗ್ರಾಹಕರ ಮನೆಗೆ ಕಾರ್ಡ್ ಸ್ವೈಪಿಂಗ್ ಯಂತ್ರ ಕೊಂಡೊಯ್ದು ಅಲ್ಲೇ ಸ್ವೈಪ್ ಮಾಡಿಸುವ ಚಿಂತನೆ ನಡೆಸಲಾಗುತ್ತಿದೆ.
Advertisement