ಪ್ರತ್ಯೇಕತಾವಾದಿ ನಾಯಕ ಗಿಲಾನಿಗೆ ಭಾರತೀಯ ಪಾಸ್ಪೋರ್ಟ್ ಮಂಜೂರು
ಶ್ರೀನಗರ: ಪ್ರತ್ಯೇಕತಾವಾದಿ ನಾಯಕ ಸಯೀದ್ ಅಲಿ ಷಾ ಗೀಲಾನಿ ಗೆ ಭಾರತದ ಪಾಸ್ಪೋರ್ಟ್ ನೀಡಲಾಗಿದೆ.
ಗಿಲಾನಿಗೆ ಪಾಸ್ಪೋರ್ಟ್ ನಿಡುವ ವಿಷಯ ಕಳೆದ ಎರಡು ತಿಂಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಭಾರತದ ಅವಿಭಾಜ್ಯ ಅಂಗವಾಗಿರುವ ಕಾಶ್ಮೀರದಲ್ಲಿ ಪ್ರತ್ಯೇಕತಾವಾದವನ್ನು ಬಿತ್ತುತ್ತಿರುವ ಗಿಲಾನಿ ದೇಶ ವಿರೋಧಿ ಚಟುವಟಿಕೆ ನಡೆಸುತ್ತಿರುವುದಕ್ಕಾಗಿ ಕ್ಷಮೆ ಯಾಚಿಸಬೇಕು ಹಾಗೂ ತಾನು ಭಾರತೀಯ ಎಂಬುದನ್ನು ಒಪ್ಪಿಕೊಳ್ಳಬೇಕೆಂದು ಬಿಜೆಪಿ ಪಟ್ಟು ಹಿಡಿದಿತ್ತು.
ಆದರೆ ಜಮ್ಮು-ಕಾಶ್ಮೀರದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಸರ್ಕಾರ ನಡೆಸುತ್ತಿರುವ ಪಿಡಿಪಿ ಮಾತ್ರ ಗಿಲಾನಿಗೆ ಪಾಸ್ಪೋರ್ಟ್ ನೀಡುವುದನ್ನು ಬೆಂಬಲಿಸಿತ್ತು. ಅಲ್ಲದೇ ಪಾಸ್ ಪೋರ್ಟ್ ನೀದಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು.
ಮೇ ನಲ್ಲಿ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಗಿಲಾನಿಗೆ ಪಾಸ್ಪೋರ್ಟ್ ನೀಡಲಾಗಿದೆ ಎಂದು ಪ್ರಾದೇಶಿಕ ಪಾಸ್ಪೋರ್ಟ್ ಅಧಿಕಾರಿ ಇಕ್ಬಾಲ್ ಹೇಳಿದ್ದಾರೆ. ಆದರೆ ಪಾಸ್ಪೋರ್ಟ್ ಅಂಗೀಕಾರಾರ್ಹತೆಯ ಅವಧಿಯ ಬಗ್ಗೆ ಮಾಹಿತಿ ನೀಡಲು ಅಧಿಕಾರಿ ನಿರಾಕರಿಸಿದ್ದಾರೆ. ಸರ್ಕಾರಿ ಮೂಲಗಳ ಪ್ರಕಾರ ಒಂದೂವರೆ ತಿಂಗಳು ಅಥವಾ 9 ತಿಂಗಳ ಸಿಂಧುತ್ವ ಅವಧಿಯನ್ನು ಹೊಂದಿದೆ ಎಂದು ತಿಳಿದುಬಂದಿದೆ.
ಗಿಲಾನಿ ಕುಟುಂಬ ಸದಸ್ಯರೂ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು, ಆದರೆ ಗಿಲಾನಿ ಸೇರಿದಂತೆ ಕುಟುಂಬದ ಯಾವುದೇ ಸದಸ್ಯರಿಗೂ ಪಾಸ್ಪೋರ್ಟ್ ಕೈ ಸೇರಿಲ್ಲ. ಪಾಸ್ಪೋರ್ಟ್ ಪಡೆಯುವ ವಿಷಯ ವಿವಾದಕ್ಕೀಡಾದ ಹಿನ್ನೆಲೆಯಲ್ಲಿ ಗಿಲಾನಿ ರಾಷ್ಟ್ರೀಯತೆ ಕಾಲಂ ನಲ್ಲಿ ಭಾರತೀಯ ಎಂದು ನಮೂದಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ