
ನವದೆಹಲಿ: ಅಖಿಲ ಭಾರತ ಮಜ್ಲಿಸ್ ಎ ಇತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಒವೈಸಿ ನೀಡಿದ್ದ ಹೇಳಿಕೆ ತಿರುಗೇಟು ನೀಡಿದ್ದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರ ಹೇಳಿಕೆ ವಿರುದ್ಧ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಲವು ಟೀಕೆಗಳು ವ್ಯಕ್ತವಾಗುತ್ತಿದೆ.
1993ರ ಮುಂಬೈ ಸರಣಿ ಸ್ಪೋಟ ಅಪರಾಧಿ ಯಾಕೂಬ್ ಮೆಮನ್ ಸುಪ್ರೀಂಕೋರ್ಟ್ ಗಲ್ಲುಶಿಕ್ಷೆ ವಿಧಿಸಿರುವುದನ್ನು ವಿರೋಧಿಸಿದ್ದ ಅಸಾದುದ್ದೀನ್ ಒವೈಸಿ ಅವರು, ಯಾಕೂಬ್ ಮೆಮನ್ ಓರ್ವ ಮುಸ್ಲಿಂನಾಗಿದ್ದರಿಂದ ಆತನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಯಿತು. ಇದು ಇಲ್ಲ ಎಂದಾದರೆ, ರಾಜೀವ್ ಹತ್ಯೆ ಪ್ರಕರಣದಲ್ಲಿನ ಅಪರಾಧಿಗಳಾದ ಸಂತಾನ್, ಮುರುಗನ್ ಮತ್ತು ಪೆರಾರಿವಲಾನ್ ಅವರಿಗೇಕೆ ಗಲ್ಲುಶಿಕ್ಷೆ ವಿಧಿಸಲಿಲ್ಲ. ಈ ಆರೋಪಿಗಳನ್ನೇಕೆ ಬಚಾವ್ ಮಾಡಲು ತಮಿಳುನಾಡು ಸರ್ಕಾರ ಪ್ರಯತ್ನ ಮಾಡುತ್ತಿದೆ. ಮರಣ ದಂಡನೆ ಕೊಡುವುದಾದರೆ ಎಲ್ಲರಿಗೂ ಕೊಡಿ. ಧರ್ಮವೊಂದನ್ನು ಟಾರ್ಗೆಟ್ ಮಾಡಬೇಡಿ. ಧರ್ಮವೊಂದನ್ನು ಟಾರ್ಗೆಟ್ ಮಾಡಿ ಶಿಕ್ಷೆ ನೀಡಿದರೆ ಇದೂ ಸಹ ಒಂದು ರೀತಿಯ ಭಯೋತ್ಪಾದನೆ ಎಂದು ಹೇಳಿದ್ದರು.
ಒವೈಸಿ ಅವರ ಈ ಹೇಳಿಕೆ ಪ್ರತಿಕ್ರಿಯೆ ನೀಡಿದ್ದ ಸಾಕ್ಷಿ ಮಹಾರಾಜ್ ಅವರು, ಭಾರತೀಯ ವ್ಯವಸ್ಥೆ ಹಾಗೂ ಕಾನೂನನ್ನು ಯಾರು ಗೌರವಿಸುವುದಿಲ್ಲವೋ ಅಂತಹವರು ಪಾಕಿಸ್ತಾನಕ್ಕೆ ಹೋಗಬಹುದು. ಅಂತಹವರಿಗಾಗಿ ಪಾಕಿಸ್ತಾನದ ಬಾಗಿಲು ಯಾವಾಗಲು ತೆಗೆದಿರುತ್ತದೆ ಎಂದು ಹೇಳಿದ್ದರು.
ಸಾಕ್ಷಿ ಮಹಾರಾಜ್ ಅವರ ಈ ಹೇಳಿಕೆಗೆ ಇದೀಗ ಟ್ವಿಟ್ಟರ್ ನಲ್ಲಿ ಟೀಕೆಗಳ ಸುರಿಮಳೆ ಆರಂಭವಾಗಿದ್ದು, ಸಾಕ್ಷಿ ಮಹಾರಾಜ್ ಪಾಕಿಸ್ತಾನದ ಪ್ರವಾಸೋದ್ಯಮ ಸಚಿವರೇ ಅಥವಾ ಟ್ರಾವೆಲ್ ಏಜೆನ್ಸಿಯನ್ನೇನಾದರೂ ಪಾಕಿಸ್ತಾನದಲ್ಲಿ ಆರಂಭಿಸಿದ್ದಾರೆಯೇ ಸುಲಭವಾಗಿ ಪಾಕಿಸ್ತಾನಕ್ಕೆ ಹೋಗಲು. ಸಾಕ್ಷಿ ಮಹಾರಾಜ್ ಅವರು ಸೇರಿ ಭಾರತದಲ್ಲಿರುವ ಪ್ರತಿಯೊಬ್ಬರೂ ಭಾರತೀಯ ವ್ಯವಸ್ಥೆಯನ್ನು ಗೌರವಿಸಬೇಕು. ಪ್ರಚೋದನಾಕಾರಿ ಹೇಳಿಕೆ ನೀಡುವುದನ್ನು ಸಾಕ್ಷಿ ಮಹಾರಾಜ್ ಮೊದಲು ನಿಲ್ಲಿಸಲಿ ಎಂಬ ಟೀಕೆಗಳು ವ್ಯಕ್ತವಾಗುತ್ತಿದೆ.
Advertisement