ಆಲ್ ಇಂಡಿಯಾ ಪ್ರಿ ಮೆಡಿಕಲ್ ಟೆಸ್ಟ್: ಅಭ್ಯರ್ಥಿಗಳು ಬುರ್ಖಾ, ಸ್ಕಾರ್ಫ್ ಧರಿಸುವಂತಿಲ್ಲ

ಸಿಬಿಎಸ್‌ಇ ಆಲ್ ಇಂಡಿಯಾ ಪ್ರಿ ಮೆಡಿಕಲ್ ಟೆಸ್ಟ್ (AIPMT) ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯೊಳಗೆ ಬುರ್ಖಾ ಅಥವಾ ತಲೆಗೆ ಸ್ಕಾರ್ಫ್...
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌

ನವದೆಹಲಿ: ಸಿಬಿಎಸ್‌ಇ ಆಲ್ ಇಂಡಿಯಾ ಪ್ರಿ ಮೆಡಿಕಲ್ ಟೆಸ್ಟ್ (AIPMT) ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯೊಳಗೆ ಬುರ್ಖಾ ಅಥವಾ ತಲೆಗೆ ಸ್ಕಾರ್ಫ್ ಧರಿಸಿ ಬರಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಆಲ್ ಇಂಡಿಯಾ ಪ್ರಿ ಮೆಡಿಕಲ್ ಟೆಸ್ಟ್ ಬರೆಯುವ ಮುಸ್ಲಿಂ ಹುಡುಗಿಯರಿಗೆ ತಲೆ ಮೇಲೆ ಸ್ಕಾರ್ಫ್ ಅಥವಾ ಬುರ್ಖಾ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡಬೇಕೆಂದು ಮುಸ್ಲಿಂ ಸಂಘಟನೆಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು.

ಶುಕ್ರವಾರ ಪ್ರಸ್ತುತ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಹೆಚ್ ಎಲ್ ದತ್ತು ಅವರ ನ್ಯಾಯಪೀಠ, ಸ್ಕಾರ್ಫ್  ಧರಿಸದೇ ಬಂದು ಪರೀಕ್ಷೆ ಬರೆದರೆ ನಿಮ್ಮ ನಂಬಿಕೆಗಳೇನೂ ಕಳೆದುಹೋಗುವುದಿಲ್ಲ ಎಂದು ಹೇಳಿದ್ದಾರೆ.

ಪರೀಕ್ಷೆ ಕೊಠಡಿಯೊಳಗೆ ಸ್ಕಾರ್ಫ್ ಧರಿಸಿ ಬರಲು ಅನುಮತಿ ನೀಡಲಾಗುವುದಿಲ್ಲ, ಪರೀಕ್ಷೆ ಮುಗಿದ ಮೇಲೆ ಸ್ಕಾರ್ಫ್ ಧರಿಸಿಕೊಳ್ಳಿ.  ನಿರ್ದಿಷ್ಟ ಬಟ್ಟೆ ಧರಿಸುವುದು ಹಾಗೂ ನಂಬಿಕೆಗಳು ಬೇರೆ ಬೇರೆಯಾಗಿವೆ ಎಂದು ಹೇಳಿದ ಕೋರ್ಟ್, ಇಂಥಾ ಬೇಡಿಕೆಯನ್ನೊಡ್ಡಿ ಅರ್ಜಿ ಸಲ್ಲಿಸಿರುವುದು ಸಂಘಟನೆಗಳ ಅಹಂ ಅಲ್ಲದೆ ಬೇರೇನೂ ಅಲ್ಲ ಎಂದು ಹೇಳಿದೆ.

ಜುಲೈ 25 ರಂದು ನಡೆಯಲಿರುವ ಎಐಪಿಎಂಟಿ ಪರೀಕ್ಷೆಗೆ ಹಿಜಾಬ್ (ತಲೆ ಮೇಲೆ ಧರಿಸುವ ಪ್ರತ್ಯೇಕ ರೀತಿಯ ಸ್ಕಾರ್ಫ್) ಧರಿಸಿ ಪರೀಕ್ಷೆ ಬರೆಯಲು ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳಿಗೆ ಕೇರಳ ಹೈಕೋರ್ಟ್ ಪರತ್ತುಬದ್ಧ ಅನುಮತಿ ನೀಡಿದ ಬೆನ್ನಲ್ಲೇ ಸುಪ್ರೀಂ ಕೋರ್ಟ್  ಸ್ಕಾರ್ಫ್ ಧರಿಸಿ ಪರೀಕ್ಷೆ ಬರೆಯುವಂತಿಲ್ಲ ಎಂಬ ತೀರ್ಪು ಹೊರಡಿಸಿದೆ.

ಪರೀಕ್ಷಾ ಕೊಠಡಿಗೆ ಅರ್ಧ ಗಂಟೆಯ ಮುನ್ನವೇ ಅಭ್ಯರ್ಥಿಗಳು ಹಾಜರಾಗಬೇಕಾಗಿದ್ದು, ಮಹಿಳಾ ಸಿಬ್ಬಂದಿಗಳು ಅಭ್ಯರ್ಥಿಗಳನ್ನು ತಪಾಸಣೆಗೊಳಪಡಿಸಲಿದ್ದಾರೆ.

ಏತನ್ಮಧ್ಯೆ, ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಪ್ರತ್ಯೇಕ ವಸ್ತ್ರ ಸಂಹಿತೆ ಜಾರಿಗೊಳಿಸಬೇಕೆಂದು ಸಿಬಿಎಸ್‌ಇ ಹೇಳಿತ್ತು. ಈ ವಿಷಯಕ್ಕೆ ಮಧ್ಯಪ್ರವೇಶ ಮಾಡಲು ಇಚ್ಛಿಸದ ಸುಪ್ರೀಂ ಕೋರ್ಟ್, ಪರೀಕ್ಷೆಯ ವೇಳೆ ವಿದ್ಯಾರ್ಥಿಗಳು ಯಾವುದೇ ರೀತಿಯಲ್ಲಿ ನಕಲು ಹೊಡೆಯಲು ಯತ್ನಿಸಿದರೆ ಅವರನ್ನು ತಪಾಸಣೆಗೊಳಪಡಿಸಬೇಕು.

ಒಂದು ವೇಳೆ ತಾವು ಧರಿಸಿದ ಡ್ರೆಸ್‌ಗಳಲ್ಲಿ ಕಾಪಿ ಚೀಟಿ ಇಟ್ಟು ನಕಲು ಹೊಡೆಯಲು ಯತ್ನಿಸಿದರೆ ಅವರ ಸ್ಕಾರ್ಫ್ ಅಥವಾ ಫುಲ್ ಸ್ಲೀವ್ ಡ್ರೆಸ್‌ನ್ನು ಕಳಚಿ ಕೂಡಾ ತಪಾಸಣೆಗೊಳಪಡಿಸಬಹುದು. ತಪಾಸಣೆಗೆ ಅಭ್ಯರ್ಥಿಗಳು ಸಹಕರಿಸಲೇ ಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com