
ನವದೆಹಲಿ: 1993ರ ಮುಂಬೈ ಸ್ಪೋಟದ ಪ್ರಮುಖ ರುವಾರಿ ಯಾಕೂಬ್ ಮೆಮನ್ ಪ್ರಬಂಧವೊಂದನ್ನು ಬರೆದಿದ್ದು, ಪ್ರಬಂಧದಲ್ಲಿ ನಾವೆಲ್ಲರೂ ಭಾರತದಲ್ಲಿನ ಒಂದು ದೊಡ್ಡ ಕುಟುಂಬದ ಸದಸ್ಯರಂತೆ, ಭಾರತದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಪ್ರೀತಿಸುವ ಹಾಗೂ ಗೌರವಿಸುವ ಗುಣಗಳನ್ನೂ ರೂಢಿಸಿಕೊಳ್ಳಬೇಕು ಎಂದು ಹೇಳಿದ್ದಾನೆ.
ಚಾರ್ಟರ್ಡ್ ಅಕೌಟೆಂಟ್ ಆಗಿರುವ ಯಾಕೂಬ್ ಮೆಮನ್ ನಾಗ್ಲುರದ ಸೆಂಟ್ರಲ್ ಜೈಲಿನಲ್ಲಿ ಕೈದಿಯಾಗಿದ್ದ ಸಂದರ್ಭದಲ್ಲಿ ಇಂಗ್ಲೀಷ್ ಸಾಹಿತ್ಯ ಹಾಗೂ ರಾಜಕೀಯ ವಿಜ್ಞಾನ ಶಾಸ್ತ್ರ ವಿಷಯಗಳಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ ವ್ಯಾಸಾಂಗ ಮಾಡಿದ್ದಾನೆ.
ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವ ವಿದ್ಯಾಲಯ ಶುಕ್ರವಾರ ಆಯೋಜಿಸಿದ್ದ ಪ್ರಂಬಂಧ ಸ್ಫರ್ಧೆಯಲ್ಲಿ ಭಾಗವಹಿಸಿದ್ದ ಯಾಕೂಬ್ ಮೆಮನ್ ಪ್ರಬಂಧದಲ್ಲಿ ತನ್ನ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದು, ಪ್ರತಿಯೊಂದು ಘಟನೆ ನಿಮಿಷದಲ್ಲೂ ನಮ್ಮನ್ನು ನಾವು ನೋಡಿಕೊಳ್ಳುತ್ತಿರುತ್ತೇವೆ. ಭಾರತದಲ್ಲಿರುವ ನಾವು ಒಂದು ಕುಟುಂಬದ ಸದಸ್ಯನಾಗಿ ಆಲೋಚನೆ ನಡೆಸಬೇಕಿದೆ. ಭಾರತದ ಕುಟುಂಬ ಸದಸ್ಯರಾಗಿರುವ ನಾವು ಪ್ರತಿಯೊಬ್ಬರನ್ನು ಗೌರವಿಸುವ ಹಾಗೂ ಪ್ರೀತಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಭಾರತದ ನಾಗರೀಕರಾಗಿ ನಾವು ನಮ್ಮ ಸಂಸ್ಕೃತಿಯನ್ನು ಬೆಳೆಸಬೇಕಿದ್ದು, ದೇಶವನ್ನು ಪ್ರೀತಿಸುವ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ದೇಶದ ಪ್ರಜೆಯಾಗಿ ಸಂವಿಧಾನ ಹಾಗೂ ಸಂಸ್ಕೃತಿಯ ಕುರಿತಂತೆ ನಮ್ಮ ಪಾತ್ರವನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕಾದದ್ದು ನಮ್ಮ ಕರ್ತವ್ಯ. ಈ ಕರ್ತವ್ಯವನ್ನೇನಾದರೂ ಮರೆತರೆ ನಮ್ಮ ಸಂಸ್ಕೃತಿ ಹಾಗೂ ನಮ್ಮ ಸಂವಿಧಾನ ಕೇವಲ ಪತ್ರಿಕೆ ಹಾಗೂ ಸುದ್ದಿಗಳಿಗೆ ಸೀಮಿತವಾಗಿ ಬಿಡುತ್ತದೆ ಎಂದು ಬರೆದಿದ್ದಾನೆ.
ಇದೇ ವೇಳೆ ಭಾರತ ಸಂವಿಧಾನ ಬದಲಾವಣೆ ಕುರಿತಂತೆ ಹೇಳಿಕೊಂಡಿರುವ ಯಾಕೂಬ್, ಬ್ರಿಟೀಷರು ತಂದ ಯೋಜನೆ ಹಾಗೂ ಕಾನೂನುಗಳಲ್ಲಿ ಈಗಾಗಲೇ ಸಾಕಷ್ಟು ಬದಲಾವಣೆಗಳಾಗಿದ್ದು, ದೇಶಗಳ ಮಧ್ಯೆ ಏರ್ಪಡುವ ಕೋಮುವಾದಗಳು ನಿಯಂತ್ರಿಸುವ ಸಾಕಷ್ಟು ಬದಲಾವಣೆಗಳಾಗಿವೆ. ದೇಶದ ಹೆದ್ದಾರಿಗಳು ಹೇಗೆ ದೂರದ ಪ್ರದೇಶ ಊರುಗಳನ್ನು ಸಂಪರ್ಕಿಸುತ್ತದೆಯೋ ಹಾಗೆಯೇ ಇಂದು ನಮ್ಮ ಸಂವಿಧಾನವೂ ಅಕ್ಷರ ರೀತಿಯಲ್ಲಿ, ಸಾಂಕೇತಿಕ ರೀತಿಯಲ್ಲಿ ಪ್ರತಿಯೊಬ್ಬರನ್ನೂ ಸಂಪರ್ಕಿಸುತ್ತಿದೆ ಎಂದು ಹೇಳಿದ್ದಾನೆ.
ಭಾರತದಲ್ಲಿರುವ ಭ್ರಷ್ಟ ಜನರ ಕೆಟ್ಟ ಅಭ್ಯಾಸದಿಂದಾಗಿ ಇದೀಗ ಗೌರವಾನ್ವಿತ ದೇಶದ ಘನತೆಗೆ ಚ್ಯುತಿ ಬರುತ್ತಿದೆ. ಇಂತಹ ವ್ಯಕ್ತಿಗಳಿಂದ ದೇಶಕ್ಕೆ ಕೆಟ್ಟ ಹೆಸರು ಬರುತ್ತಿದ್ದು, ಇದೀಗ ಭಾರತದಲ್ಲಿರುವ ಪ್ರತಿಯೊಬ್ಬರು ನೈತಿಕ ಜವಾಬ್ದಾರಿ ಹೊತ್ತು ಕೆಟ್ಟ ವ್ಯಕ್ತಿಗಳನ್ನು ದೇಶದಿಂದ ಮುಕ್ತಗೊಳಿಸಿ ಶುದ್ಧ ಮಾಡಬೇಕಿದೆ ಎಂದಿದ್ದಾನೆ.
1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ರುವಾರಿ ಯಾಕೂಬ್ ಅಬ್ದುಲ್ ರಜಾಕ್ ಮೆಮನ್ ನನ್ನು ಗಲ್ಲಿಗೇರಿಸಲು ಇದೀಗ ನಾಗ್ಲುರ ಜೈಲಿನಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಜುಲೈ.30 ರಂದು ಗಲ್ಲು ಶಿಕ್ಷೆ ವಿಧಿಸಲಾಗುತ್ತಿದೆ. ನ್ಯಾಯಾಲಯ ನೀಡಿದ್ದ ಗಲ್ಲುಶಿಕ್ಷೆ ವಿರೋಧಿಸಿದ್ದ ಯಾಕೂಬ್ ಸುಪ್ರೀಂಕೋರ್ಟ್ ನಲ್ಲಿ ಕ್ಯೂರೇಟರ್ ಅರ್ಜಿ ದಾಖಲಿಸಿದ್ದ. ಈ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು.
Advertisement