
ಶ್ರೀನಗರ: ಉತ್ತರ ಕಾಶ್ಮೀರದ ಬಲ್ತಾಲ್ ಪ್ರದೇಶದಲ್ಲಿ ಕಳೆದ ರಾತ್ರಿ ಪ್ರವಾಹಕ್ಕೆ ಸಿಲುಕಿ ಇಬ್ಬರು ಅಮರನಾಥ ಯಾತ್ರಿಕರು ಸಾವನ್ನಪ್ಪಿದ್ದು, 9 ಮಂದಿ ಗಾಯಗೊಂಡಿದ್ದಾರೆ. ಇನ್ನು 7 ಮಂದಿ ನಾಪತ್ತೆಯಾಗಿದ್ದಾರೆ.
14 ಕಿ.ಮೀ ಉದ್ದದ ಚಾರಣ ಮಾರ್ಗ ಬಲ್ತಾಲ್ ಅಮರನಾಥ ದೇವಾಲಯಕ್ಕೆ ತೆರಳುವ ಕಿರುದಾರಿಯಾಗಿದ್ದು, ಇಲ್ಲಿ ಕಳೆದೊಂದು ದಿನದಿಂದ ಧಾರಾಕಾರ ಮಳೆಯಾಗುತ್ತಿದ್ದು, ಯಾತ್ರಿಕರು ಸಿಕ್ಕಿಹಾಕಿಕೊಂಡಿದ್ದಾರೆ.
ಇದೀಗ ಸೇನೆಯ ತುರ್ತು ಕಾರ್ಯಪಡೆ ಬಲ್ತಾಲ್ ಪ್ರದೇಶದಲ್ಲಿ ಪರಿಹಾರ ಕಾರ್ಯಾಚರಣೆ ಕೈಗೊಂಡಿದೆ.ಇದುವರೆಗೆ ಇಬ್ಬರ ಶವಗಳನ್ನು ಹೊರತೆಗೆಯಲಾಗಿದ್ದು, ರಾಜಸ್ತಾನದ ಪೂಜಾ (13 ವ) ಮತ್ತು ವಿಕ್ರಮ್ (12ವ) ಎಂಬ ಮಕ್ಕಳದ್ದು ಎಂದು ಗುರುತಿಸಲಾಗಿದೆ.
ಈ ಹಾದಿಯು ಅಪಾಯದಲ್ಲಿರುವುದರಿಂದ 15 ಸಾವಿರ ಯಾತ್ರಿಕರು ಮತ್ತು 780 ಸೈನಿಕರನ್ನು ಸುರಕ್ಷಿತ ಸ್ಥಳಗಳಿಗೆ ವರ್ಗಾಯಿಸಲಾಗಿದೆ. ಕಾಣೆಯಾದವರಲ್ಲಿ 6 ಮಂದಿ ಸ್ಥಳೀಯರಾಗಿದ್ದು, ಇಬ್ಬರು ಹೊರ ರಾಜ್ಯದವರಾಗಿದ್ದಾರೆ.
ಬಲ್ತಾಲ್ ಪ್ರದೇಶದಲ್ಲಿ ಯಾತ್ರಿಕರ ವಾಹನಗಳು ಸೇರಿದಂತೆ ಹಲವು ವಾಹನಗಳು ಭೂ ಕುಸಿತದಲ್ಲಿ ಸಿಲುಕಿ, ಕನಿಷ್ಠ 12 ವಾಹನಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಸೇನಾಪಡೆಯ ಇಂಜಿನಿಯರ್ ಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ ಎಂದು ಶ್ರೀನಗರದ ಸೇನಾ ವಕ್ತಾರ ಕರ್ನಲ್ ಬ್ರಿಜೇಶ್ ಪಾಂಡೆ ತಿಳಿಸಿದ್ದಾರೆ. ಕಾಣೆಯಾದವರ ಪತ್ತೆಗಾಗಿ ಜಿಲ್ಲಾಡಳಿತ ಕೂಡ ಶ್ರಮಿಸುತ್ತಿದೆ.
ಜುಲೈ 16ರಂದು ಕೂಡ ಇದೇ ಭಾಗದಲ್ಲಿ ಧಾರಾಕಾರ ಮಳೆ ಸುರಿದು ಭೂ ಕುಸಿತ ಉಂಟಾಗಿ ಇಬ್ಬರು ಸಾವನ್ನಪ್ಪಿದ್ದರು.ಜುಲೈ 12ರಂದು, ದಕ್ಷಿಣ ಕಾಶ್ಮೀರದಲ್ಲಿ ಪ್ರವಾಹ ಉಂಟಾಗಿ ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಈ ವರ್ಷ ಕಾಶ್ಮೀರದಲ್ಲಿ ಅವ್ಯಾಹತ ಮಳೆ ಸುರಿಯುತ್ತಿದೆ.
ಹವಾಮಾನ ವೈಪರೀತ್ಯ: ಸಪ್ಟೆಂಬರ್ ತಿಂಗಳವರೆಗೆ ಕಾಶ್ಮೀರದಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ. ಬಂಗಾಳಕೊಲ್ಲಿಯಿಂದ ಮುಂಗಾರು ಪ್ರವಾಹಗಳು ಹುಟ್ಟಿಕೊಂಡು ಕಣಿವೆ ರಾಜ್ಯದಲ್ಲಿ ಸತತ ಮಳೆ ಸುರಿಯಲಿದೆ ಎಂದು ಕಾಶ್ಮೀರ ವಿಶ್ವವಿದ್ಯಾಲಯದ ಭೂ ವಿಜ್ಞಾನದ ಮುಖ್ಯಸ್ಥ ಡಾ.ಶಕಿಲ್ ರೊಮ್ಶೋ ತಿಳಿಸಿದ್ದಾರೆ. ಪರ್ವತ ಪ್ರದೇಶಗಳಲ್ಲಿ ಜನರು ಆದಷ್ಟು ವಾಸಿಸದಿರುವುದು ಒಳಿತು ಎಂದು ಅವರು ಹೇಳಿದ್ದಾರೆ.
Advertisement