
ದ್ರಾಸ್ (ಜಮ್ಮು-ಕಾಶ್ಮೀರ): ಕಾರ್ಗಿಲ್ ಯುದ್ಧದ ತರಹದ ಇನ್ನೊಂದು ಯುದ್ಧ ನಡೆಯಲು ಬಿಡುವುದಿಲ್ಲ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಶನಿವಾರ ಹೇಳಿದ್ದಾರೆ.
16ನೇ ವರ್ಷದ ಕಾರ್ಗಿಲ್ ವಿಜಯ ದಿವಸ ಆಚರಣೆ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಮಡಿದ ಸೈನಿಕರಿಗೆ ಗೌರವ ಸಮರ್ಪಣೆ ಸಲ್ಲಿಸಿ ಮಾತನಾಡಿದ ಅವರು, ಕಾರ್ಗಿಲ್ ಯುದ್ಧ ಇತಿಹಾಸ. ಇನ್ನು ಮುಂದೆ ಆ ರೀತಿಯ ಯುದ್ಧ ಘಟಿಸಲು ಭಾರತೀಯ ಸೇನೆ ಬಿಡುವುದಿಲ್ಲ ಎಂದು ಹೇಳಿದರು.
ಕಾರ್ಗಿಲ್ ವಿಜಯ ದಿವಸದ ಸಂಭ್ರಮಾಚರಣೆ ದ್ರಾಸ್ ನ ಕಾರ್ಗಿಲ್ ಸ್ಮಾರಕದ ಬಳಿ ಕಳೆದ 5 ದಿನಗಳ ಹಿಂದೆ ಆರಂಭವಾಗಿದ್ದು, ಮುಖ್ಯ ಸಮಾರಂಭ ಇಂದು ಮತ್ತು ನಾಳೆ ನಡೆಯಲಿದೆ.ಮಿಲಿಟರಿ ಅಧಿಕಾರಿಗಳು, ಧಾರ್ಮಿಕ ಮುಖಂಡರು ಇಂದು ಮತ್ತು ನಾಳೆ ಮೋಂಬತ್ತಿ ಹಚ್ಚಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಯೋಧರ ಸ್ಮಾರಕಗಳಿಗೆ ಹೂ ಹಾರ ಹಾಕುವ ಕಾರ್ಯಕ್ರಮ ನಾಳೆ ನಡೆಯಲಿದೆ.
1999 ಮೇ ತಿಂಗಳಿನಿಂದ ಜುಲೈವರೆಗೆ ಭಾರತ-ಪಾಕಿಸ್ತಾನ ಮಧ್ಯೆ ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಯುದ್ಧ ನಡೆದಿತ್ತು. ಗಡಿಯಲ್ಲಿನ ಭಾರತದ ಪ್ರದೇಶವನ್ನು ಪಾಕ್ ಆಕ್ರಮಿಸಿಕೊಳ್ಳಲು ಯತ್ನಿಸಿದ್ದು ಯುದ್ಧ ನಡೆಯಲು ಕಾರಣವಾಯಿತು. ಎರಡು ತಿಂಗಳಿಗೂ ಹೆಚ್ಚು ಕಾಲ ನಡೆದ ಯುದ್ಧದಲ್ಲಿ ಭಾರತ ವಿಜಯಶಾಲಿಯಾಯಿತು.
ಈ ಯುದ್ಧದಲ್ಲಿ 490 ಮಂದಿ ಭಾರತೀಯ ಯೋಧರು ಮತ್ತು ಸೇನಾಧಿಕಾರಿಗಳು ಸಾವನ್ನಪ್ಪಿದ್ದರು.
Advertisement