61 ಸಾವಿರ ಭಾರತೀಯ ಕೋಟ್ಯಧಿಪತಿಗಳು ಕಳೆದ 14 ವರ್ಷದಲ್ಲಿ ವಿದೇಶಕ್ಕೆ ವಲಸೆ

ಕಳೆದ 14 ವರ್ಷಗಳಲ್ಲಿ 61 ಸಾವಿರ ಭಾರತೀಯ ಕೋಟ್ಯಧಿಪತಿಗಳು ವಿದೇಶಕ್ಕೆ ವಲಸೆ ಹೋಗಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ...
ವಿಮಾನ
ವಿಮಾನ

ನವದೆಹಲಿ: ಕಳೆದ 14 ವರ್ಷಗಳಲ್ಲಿ  61 ಸಾವಿರ ಭಾರತೀಯ ಕೋಟ್ಯಧಿಪತಿಗಳು ವಿದೇಶಕ್ಕೆ ವಲಸೆ ಹೋಗಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

ನ್ಯೂ ವರ್ಲ್ಡ್ ವೆಲ್ತ್ ಮತ್ತು ಎಲ್ಐಓ ಗ್ಲೋಬಲ್ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ ಈ ಅಂಶ ಹೊರಬಿದ್ದಿದ್ದು,  ವಿದೇಶಗಳಿಗೆ ವಲಸೆ ಹೋಗಲು ಭದ್ರತೆ, ತೆರಿಗೆ ಮತ್ತು ಮಕ್ಕಳ ಶಿಕ್ಷಣ ಪ್ರಮುಖ ಕಾರಣಗಳಾಗಿವೆ. ವಲಸೆಯಲ್ಲಿ ಚೀನಾ ನಂತರ ಭಾರತವೇ ಅಗ್ರಗಣ್ಯ ಸ್ಥಾನದಲ್ಲಿದೆ.

2000-2014ರವರೆಗೆ ವಲಸೆ ಹೋದ ಕೋಟ್ಯಧಿಪತಿಗಳು
ಕಳೆದ 14 ವರ್ಷದಲ್ಲಿ ಚೀನಾದಿಂದ 91 ಸಾವಿರ, ಭಾರತದಿಂದ 61 ಸಾವಿರ, ಫ್ರಾನ್ಸ್ 42 ಸಾವಿರ, ಇಟಲಿ 23 ಸಾವಿರ, ರಷ್ಯಾ 20 ಸಾವಿರ, ಇಂಡೋನೇಷ್ಯಾ 12 ಸಾವಿರ, ದಕ್ಷಿಣ ಆಫ್ರಿಕಾ 8 ಸಾವಿರ ಹಾಗೂ ಈಜಿಪ್ಟ್ 7 ಸಾವಿರ ಮಂದಿ ವಲಸೆ ಹೋಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೋಟ್ಯಧಿಪತಿ ವಲಸಿಗರನ್ನು ಬರಮಾಡಿಕೊಂಡ ದೇಶಗಳ ಪೈಕಿ ಬ್ರಿಟನ್ ದೇಶ ಅಗ್ರಸ್ಥಾನದಲ್ಲಿ ನಿಂತಿದೆ. ಅಮೆರಿಕ, ಯುಎಇ, ಆಸ್ಟ್ರೇಲಿಯಾ, ಸಿಂಗಾಪುರ ದೇಶಗಳಿಗೂ ಸಿರಿವಂತರು ಹೆಚ್ಚಿನ ಪ್ರಮಾಣದಲ್ಲಿ ವಲಸೆ ಹೋಗುತ್ತಾರೆ. ಭಾರತೀಯ ಕೋಟ್ಯಧಿಪತಿಗಳು ಅತೀ ಹೆಚ್ಚು ವಲಸೆ ಹೋಗುವುದು ಅರಬ್ ನಾಡಿಗೆ. ಆ ನಂತರದ ಸ್ಥಾನ ಬ್ರಿಟನ್, ಅಮೆರಿಕ, ಆಸ್ಟ್ರೇಲಿಯಾ ಮತ್ತು ಸಿಂಗಾಪುರ ದೇಶಗಳಾಗಿವೆ. ಚೀನಾದವರು ಹೆಚ್ಚಾಗಿ ವಲಸೆ ಹೋಗುವುದು ಅಮೆರಿಕ ಮತ್ತು ಸಿಂಗಾಪುರಕ್ಕೆ ಎನ್ನಲಾಗಿದೆ.

ಯಾರು ಕೋಟ್ಯಧಿಪತಿಗಳು..?
ಈ ವರದಿಯಲ್ಲಿ ಉಲ್ಲೇಖಿಸಿರುವ ಕೋಟ್ಯಧಿಪತಿಗಳೆಂದರೆ, ಯಾವ ವ್ಯಕ್ತಿ ಬಳಿ ವಾಸಕ್ಕಿರುವ ಮನೆಯನ್ನು ಬಿಟ್ಟು 10 ಲಕ್ಷ ಅಮೆರಿಕನ್ ಡಾಲರ್ ಮೌಲ್ಯದ ಆಸ್ತಿಯನ್ನು ಹೊಂದಿರುವನಾಗಿರುತ್ತಾನೆ. ಅಂದರೆ, ಆತ 6 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಗಳ ಒಡೆಯನಾಗಿರಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com