
ನವದೆಹಲಿ: ಪಂಜಾಬ್ ನ ದೀನ ನಗರ್ ಪೊಲೀಸ್ ಠಾಣೆ ಮೇಲೆ ಉಗ್ರರ ದಾಳಿ ಪ್ರಕರಣದಲ್ಲಿ ಉಗ್ರರು ಯಾರನ್ನೂ ಒತ್ತೆಯಾಳಾಗಿರಿಸಿಕೊಂಡಿಲ್ಲ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಸೋಮವಾರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಪಂಜಾಬ್ ಪೊಲೀಸ್ ಠಾಣೆ ಮೇಲೆ ಉಗ್ರರು ದಾಳಿ ಮಾಡಿರುವುದು ಧೃಢವಾಗಿದೆ. ಆದರೆ, ಒತ್ತೆಯಾಳುಗಳಾಗಿರಿಸಿಕೊಂಡಿರುವ ಕುರಿತಂತೆ ಈ ವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಮಾಹಿತಿ ದೊರೆತ ಕೂಡಲೇ ಹೇಳಲಾಗುತ್ತದೆ. ಎಂದು ಹೇಳಿದ್ದಾರೆ.
ಘಟನೆ ಕುರಿತಂತೆ ಈಗಾಗಲೇ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಸಚಿವಾಲಯವು, ಉಗ್ರರ ದಾಳಿ ಪ್ರಕರಣ ಗಂಭೀರವಾಗಿದ್ದು, ಕಾರ್ಯಾಚರಣೆ ಪ್ರಗತಿಯಲ್ಲಿರುವ ಸಂದರ್ಭದಲ್ಲಿ ಮಾಹಿತಿ ನೀಡಲು ಸಾಧ್ಯವಿಲ್ಲ. ಘಟನಾ ಸ್ಥಳದಲ್ಲಿ ಭದ್ರತಾ ಸಿಬ್ಬಂದಿಗಳು ನಿಯೋಜನೆಗೊಂಡಿದ್ದು, ಕಾರ್ಯಾಚರಣೆ ನಡೆಸಲಾಗುತ್ತಿದೆ. ಅಗತ್ಯಬಿದ್ದರೆ ಮತ್ತಷ್ಟು ಭದ್ರತಾ ಪಡೆಗಳನ್ನು ನಿಯೋಜನೆಗೊಳಿಸಲಾಗುತ್ತದೆ ಎಂದು ಹೇಳಿದೆ.
ಮೂಲಗಳ ಪ್ರಕಾರ ಪಂಜಾಬ್ ದೀನನಗರ್ ಪೊಲೀಸ್ ಠಾಣೆಯ ಬಳಿ ಬಿಳಿ ಆಲ್ಟೋ ಕಾರಿನಲ್ಲಿ ಸೇನಾ ಉಡುಪು ಧರಿಸಿ ಸುಸಜ್ಜಿತ ಶಸ್ತ್ರಾಸ್ತ್ರಗಳೊಂದಿಗೆ ಬಂದ ಬಂದೂಕು ದಾರಿಗಳು ಠಾಣೆ ಸುತ್ತುವರೆದಿದ್ದಾರೆ. ನಂತರ ಇದ್ದಕ್ಕಿದ್ದಂತೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನೆಯಲ್ಲಿ ಇದೀಗ 5 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
Advertisement