ಪಂಜಾಬ್ ನಲ್ಲಿ ಸೇನಾ ಕಾರ್ಯಾಚರಣೆ ಅಂತ್ಯ: ಮೂವರು ಉಗ್ರರ ಹತ್ಯೆ

ಪಂಜಾಬ್ ನ ಗುರುದಾಸ್‌ಪುರದಲ್ಲಿ ಭಯೋತ್ಪಾದಕರ ವಿರುದ್ಧ ಸೇನೆ ನಡೆಸಿದ ಕಾರ್ಯಾಚರಣೆ ಮುಕ್ತಾಯಗೊಂಡಿದ್ದು, ಎಲ್ಲಾ ಉಗ್ರರನ್ನು ಹೊಡೆದುರುಳಿಸಲಾಗಿದೆ.
ಪಂಜಾಬ್ ನಲ್ಲಿ ಭಯೋತ್ಪಾದಕರ ವಿರುದ್ಧ ಸೇನಾ ಕಾರ್ಯಾಚರಣೆ(ಸಂಗ್ರಹ ಚಿತ್ರ)
ಪಂಜಾಬ್ ನಲ್ಲಿ ಭಯೋತ್ಪಾದಕರ ವಿರುದ್ಧ ಸೇನಾ ಕಾರ್ಯಾಚರಣೆ(ಸಂಗ್ರಹ ಚಿತ್ರ)

ದೀನಾನಗರ್: ಪಂಜಾಬ್ ನ ಗುರುದಾಸ್‌ಪುರದಲ್ಲಿ ಭಯೋತ್ಪಾದಕರ ವಿರುದ್ಧ ಸೇನೆ ನಡೆಸಿದ ಕಾರ್ಯಾಚರಣೆ ಮುಕ್ತಾಯಗೊಂಡಿದ್ದು, ಎಲ್ಲಾ ಉಗ್ರರನ್ನು ಹೊಡೆದುರುಳಿಸಲಾಗಿದೆ.

ಇತ್ತೀಚಿನ ವರದಿ ಪ್ರಕಾರ, ಮೂರು ಉಗ್ರರನ್ನು ಹತ್ಯೆ ಮಾಡಲಾಗಿದ್ದು ಕಾರ್ಯಾಚರಣೆಯಲ್ಲಿ ಎಸ್.ಪಿ, ಇಬ್ಬರು ಹೋಂ ಗಾರ್ಡ್ ಗಳು ಮೂವರು ನಾಗರಿಕರು  ಸೇರಿದಂತೆ ಒಟ್ಟು 6 ಜನರು ಸಾವನ್ನಪ್ಪಿದ್ದಾರೆ.

ಭಯೋತ್ಪಾದಕರು ದಾಳಿ ನಡೆಸಿದ್ದ ಪ್ರದೇಶವನ್ನು ಸೇನೆ ಸುರಕ್ಷಿತವಾಗಿ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದೆ ಎಂದು ಗೃಹ ಇಲಾಖೆ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.  ಸೇನಾ ಕಾರ್ಯಾಚರಣೆ ಮುಕ್ತಾಯಗೊಂಡಿದ್ದು, ಪಂಜಾಬ್ ಪೊಲೀಸರು ಹಾಗೂ ಇತರ ಭದ್ರತಾ ಸಂಸ್ಥೆಗಳು ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. ಕೂಂಬಿಂಗ್ ಕಾರ್ಯಾಚರಣೆ ಮುಕ್ತಾಯಗೊಂಡ  ನಂತರವಷ್ಟೇ ಸೇನಾ ದಾಳಿಯಲ್ಲಿ ಹತ್ಯೆಗೀಡಾದ ಭಯೋತ್ಪಾದಕರ ನಿಖರ ಸಂಖ್ಯೆ ತಿಳಿಯಲಿದೆ. 

ದಾಳಿ ನಡೆಸಿರುವ  ಉಗ್ರ ಸಂಘಟನೆ ಯಾವುದೆಂದು ತಕ್ಷಣವೇ ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ ಪಾಕಿಸ್ತಾನ ಮೂಲದ ಲಷ್ಕರ್-ಎ- ತಯ್ಬಾ ಉಗ್ರ ಸಂಘಟನೆ ಈ ದಾಳಿ ನಡೆಸಿದೆ ಎಂದು ಶಂಕಿಸಲಾಗಿದೆ. ಜಮ್ಮು ಪ್ರದೇಶದಲ್ಲಿ ಇತ್ತೀಚಗಷ್ಟೆ ನಡೆದ ದಾಳಿಗೆ ಪಂಜಾಬ್ ನಲ್ಲಿ ನಡೆದಿರುವ ದಾಳಿಗೂ ಸಾಮ್ಯತೆ ಇರುವುದರಿಂದ ಲಷ್ಕರ್ ಉಗ್ರ ಸಂಘಟನೆ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂಬ ಅನುಮಾನವಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ದಾಳಿಯಲ್ಲಿ ಗಾಯಗೊಂಡ 8 ಜನರ ಪೈಕಿ 7 ಜನರಿಗೆ ತೀವ್ರ ಗಾತಗಳಾಗಿದ್ದು ಅಮೃತಸರದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರೆಲ್ಲರೂ 15 -54 ವಯಸ್ಸಿನವರಾಗಿದ್ದಾರೆ.  ಪ್ರಥಮ ದಾಳಿ ರಸ್ತೆ ಬದಿಯಲ್ಲಿದ್ದ ವ್ಯಾಪಾರಿಯ ಮೇಲೆ ನಡೆದಿದ್ದು, ಪಂಜಾಬ್ ನೊಂದಣಿ ಇರುವ ಮಾರುತಿ 800 ಕಾರ್ ನಲ್ಲಿ ಬಂದಿದ್ದ ಉಗ್ರರು ಆತನನ್ನು ಹತ್ಯೆ ಮಾಡಿದ್ದರೆ ಎಂದು ಪೊಲೀಸರು ತಿಳಿಸಿದ್ದಾರೆ.  ನಂತರ ದೀನಾನಗರ್ ಪೊಲೀಸ್ ಠಾಣೆಗೆ ನುಗ್ಗಿದ ಉಗ್ರರು ನಿರಂತರವಾಗಿ ಗುಂಡಿನ ದಾಳಿ ನಡೆಸಿದ್ದಾರೆ.

ಭಯೋತ್ಪಾದಕರ ದಾಳಿಯಿಂದ ಪಂಜಾಬ್ ಹಾಗೂ ಜಮ್ಮು ವ್ಯಾಪ್ತಿಯಲ್ಲಿರುವ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಎಚ್ಚರಿಕೆಯಿಂದಿರುವಂತೆ ಸೇನೆಗೆ ಸೂಚನೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com